ರಂಗ ಸಾಧಕರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರದಾನ
ಉಡುಪಿ(ಉಡುಪಿ ಟೈಮ್ಸ್ ವರದಿ): ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಲಬಾರ್ ವಿಶ್ವರಂಗ ಪುರಸ್ಕಾರ – 2020 ಪ್ರದಾನ ಸಮಾರಂಭವು ಉಡುಪಿ ಗೀತಾಂಜಲಿ ಬಳಿಯ ಮಲಬಾರ್ ಗೋಲ್ಡ್ ಸಂಕಿರ್ಣದಲ್ಲಿ ಜರಗಿತು.
ರಂಗ ಕಲೆಗೆ ವಿಶೇಷ ಕೊಡುಗೆ ನೀಡಿದ ಸಾಧಕರಾದ ಶ್ರೀನಿವಾಸ್.ಶೆಟ್ಟಿಗಾರ್, ಡಾ.ಮಾಧವಿ ಭಂಡಾರಿ, ಜಯರಾಮ ನೀಲಾವರ, ರಾಜಗೋಪಾಲ್ ಶೇಟ್ ಹಾಗೂ ಅಭಿಲಾಷಾ ಎಸ್. ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ ಅವರು ಮಾತನಾಡುತ್ತಾ ಜಿಲ್ಲೆಯ ಪ್ರಸಿದ್ಧ ರಂಗಕರ್ಮಿಗಳನ್ನು ಪುರಸ್ಕರಿಸುವ ಈ ಅಪರೂಪ ಕಾರ್ಯಕ್ರಮವನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳಿಂದ ಉಡುಪಿಯು ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಪೂರ್ಣಿಮ ಜನಾರ್ಧನ್ , ತನುಶ್ರೀ ಪಿತ್ರೋಡಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರಾಂಕ್ ಪಡೆದ ಪದ್ಮಾಸಿನಿ ಉದ್ಯಾವರ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯ ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆಯ ಎಂ.ಸಿ.ಇ.ಎಸ್ ವಿಭಾಗದ ನಿರ್ದೇಶಕಿ ಡಾ.ನೀತಾ ಇನಾಮ್ದಾರ್ ಹಾಗು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಭೆಯಲ್ಲಿ ಉಪಸ್ಥಿತರಿದ್ದರು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಸ್ ರೆಹಮಾನ್, ಪ್ರತಿಷ್ಠಾನದ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕ ರವಿರಾಜ್ ಎಚ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಭಟ್ ಪಣಿಯಾಡಿ ಪ್ರಶಸ್ತಿ ಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ಕಥಾ ಸಪ್ತಾಹ ಪ್ರಯುಕ್ತ ಏರ್ಪಡಿಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ವಿಘ್ನೇಶ್ವರ ಅಡಿಗ ಸ್ವಾಗತಿಸಿದರು. ವಿವೇಕಾನಂದ ಕಾರ್ಯಕ್ರಮ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ ಧನ್ಯವಾದ ನೀಡಿದರು.