ಇನ್ಮುಂದೆ ಒಮ್ಮೆಲೇ 5 ಲಕ್ಷ ರೂ. UPI ಪೇ ಮಾಡಬಹುದು!
ಹೊಸದಿಲ್ಲಿ : ಹಣ ಪಾವತಿಸಲು ಗೂಗಲ್ ಪೇ, ಫೋನ್ ಪೇ ಮುಂತಾದ UPI ವಿಧಾನ ಬಳಸುವವರಿಗೊಂದು ಸಿಹಿ ಸುದ್ದಿ ಇದೆ. ಈಗ UPI ವಹಿವಾಟು ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ತೆರಿಗೆ ಪಾವತಿದಾರರೂ ಸೇರಿದಂತೆ ಲಕ್ಷಾಂತರ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ಯುಪಿಐ ಮೂಲಕ ಹಣ ಪಾವತಿಸುವಾಗ ಒಂದು ಟ್ರಾನ್ಸಾಕ್ಷನ್ನಲ್ಲಿ 1 ಲಕ್ಷ ರೂ ವರೆಗೆ ಮಾತ್ರ ಹಣ ಕಳಿಸಬಹುದು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ತನ್ನ ಪಾವತಿ ಮಿತಿಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಸೆಪ್ಟೆಂಬರ್ 16ರಿಂದಲೇ ಜಾರಿಗೆ ಬಂದಿದೆ.
ತೆರಿಗೆ ಪಾವತಿಗಳಿಗೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ, ಹಾಗು ಐಪಿಒ ಮತ್ತು ಆರ್ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್ಗಳಿಗೆ ಯುಪಿಐ ಮೂಲಕ ಈಗ ಒಂದೇ ಬಾರಿಗೆ 5 ಲಕ್ಷ ರೂ ವರೆಗೆ ಪಾವತಿ ಮಾಡಬಹುದು.
ಇದಕ್ಕೆ ಸಂಬಂಧಪಟ್ಟಂತೆ ಆಗಸ್ಟ್ 24ರಂದು ಎನ್‌ಪಿಸಿಐ ಸುತ್ತೋಲೆ ಹೊರಡಿಸಿತ್ತು. ತೆರಿಗೆ ಪಾವತಿದಾರರಿಗೆ ತೆರಿಗೆ ಪಾವತಿ ಸರಳೀಕೃತಗೊಳಿಸುವ ಸಲುವಾಗಿ ತೆರಿಗೆ ಪಾವತಿ ಮಿತಿಯನ್ನು ಹೆಚ್ಚಿಸಲಾಗಿದೆ.
ಹಾಗಾಗಿ, ಈಗ 5 ಲಕ್ಷ ರೂ. ತೆರಿಗೆ ಪಾವತಿಸಬೇಕಿದ್ದರೆ ಗೂಗಲ್ ಪೇ, ಫೋನ್ ಪೇ ಮುಂತಾದ UPI ಮೂಲಕವೇ ಪಾವತಿಸಬಹುದು. ಇದಲ್ಲದೆ, ಆಸ್ಪತ್ರೆಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ಕೂಡ ಒಂದೇ ಬಾರಿಗೆ 5 ಲಕ್ಷ ರೂ ವರೆಗೆ ಪಾವತಿಸಲು ಸಾಧ್ಯವಾಗುತ್ತದೆ.
ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆಯ ಅವಶ್ಯಕತೆ ಇರುವ ಐಪಿಒ ಮತ್ತು ಆರ್ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್ಗಳಿಗೂ ಈಗ UPI ಮೂಲಕ ಹಣ ಪಾವತಿಸಬಹುದು. ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ ವರೆಗೂ ಪಾವತಿಸಲು ಆವಕಾಶ ಇರುವುದರಿಂದ ಚೆಕ್ ಅಥವಾ ಕಾರ್ಡ್ ಬಳಕೆ ಅಗತ್ಯವಿರುವುದಿಲ್ಲ.
ಈಗಾಗಲೇ ಉಲ್ಲೇಖಿಸಲಾದ ನಿರ್ದಿಷ್ಟ ವ್ಯವಹಾರಗಳಿಗೆ ಮಾತ್ರವೇ ಈ ಮಿತಿ ಹೆಚ್ಚಳ ಅನ್ವಯವಾಗುತ್ತದೆ. ಮಿತಿ ಹೆಚ್ಚಳ ಕುರಿತ ಎನ್‌ಪಿಸಿಐ ಹೊಸ ಸುತ್ತೋಲೆಯಂತೆ ಬ್ಯಾಂಕ್‌ಗಳು, ಪೇಮೆಂಟ್ ಸರ್ವಿಸ್ ಪೂರೈಕೆದಾರರು, ಯುಪಿಐ ಆ್ಯಪ್ಗಳು ಸೇರಿದಂತೆ ಪೇಮೆಂಟ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಭಾಗಿಯಾಗಿರುವ ಎಲ್ಲಾ ಸದಸ್ಯರಿಗೂ ಎನ್ಪಿಸಿಐ ಹೊಸ ಯುಪಿಐ ಟ್ರಾನ್ಸಾಕ್ಷನ್ ಅಪ್ಪರ್ ಲಿಮಿಟ್ ಬಗ್ಗೆ ಮೊದಲೇ ಸೂಚನೆ ನೀಡಿದೆ.
ಅವು ತಮ್ಮ ಸಿಸ್ಟಮ್‌ಗಳನ್ನು ನೂತನ ನಿಯಮಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಸೂಚಿಸಲಾಗಿದೆ. ಹೊಸ ಫೀಚರ್ ಲಭ್ಯವಿರುವ ಬಗ್ಗೆ app ಬಳಕೆದಾರರು ಖಚಿತಪಡಿಸಿಕೊಳ್ಳಬಹುದು.
ಪಾವತಿ ಮಿತಿ ಎಲ್ಲ ಬ್ಯಾಂಕ್ಗಳಲ್ಲೂ ಒಂದೇ ರೀತಿ ಇರಬೇಕೆಂದಿಲ್ಲ. UPI ಪಾವತಿಗೆ ಬ್ಯಾಂಕ್ಗಳು ತಮ್ಮದೇ ಮಿತಿ ಹೇರಲು ಅವಕಾಶವಿದೆ. ಕೆಲ ಬ್ಯಾಂಕ್ಗಳು 25 ಸಾವಿರಕ್ಕೆ UPI ಪಾವತಿ ಮಿತಿ ನಿಗದಿಪಡಿಸಿದ್ದರೆ, ಮತ್ತೆ ಕೆಲವು ಬ್ಯಾಂಕುಗಳು 1 ಲಕ್ಷದವರೆಗೆ ಪಾವತಿಗೆ ಅವಕಾಶ ನೀಡುತ್ತವೆ.