ನಿರ್ಲಕ್ಷ್ಯ ಮಾಡಿದ್ರೆ ಸಿಎಂ ಮನೆ ಮುಂದೆ ಧರಣಿ- ಉಡುಪಿ ಜಿಲ್ಲೆಯ ಐವರು ಶಾಸಕರ ಎಚ್ಚರಿಕೆ
ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ಕರಾವಳಿಯ ಮೂರು ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಮುಖ್ಯಮಂತ್ರಿ ಮನೆಯ ಮುಂದೆ ಧರಣಿ ಕೂರುತ್ತೇವೆ ಎಂದು ಉಡುಪಿ ಜಿಲ್ಲೆಯ ಐದು ಶಾಸಕರು ಹಾಗೂ ಸಂಸದರು ಎಚ್ಚರಿಕೆ ನೀಡಿದರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರು ಜಂಟಿಯಾಗಿ ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕು ಮಟ್ಟದ ಅಧಿಕಾರಿಗಳ ನಿರಂತರ ವರ್ಗಾವಣೆ ಮಾಡಲಾಗುತ್ತಿದೆ. ಶಾಸಕರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಸಹಕಾರ ನೀಡುತ್ತಿದ್ದಾರೆ. ಜನಪ್ರತಿನಿಧಿಗಳು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು ನಮ್ಮ ಬೇಡಿಕೆ ನೀಡಿದ್ದೇವೆ. ಈ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಕರಾವಳಿಯ ನಿರ್ಲಕ್ಷ ಮುಂದುವರಿಸ ಬಾರದು. ಸಮಸ್ಯೆಗಳನ್ನು 10 ದಿನದೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಸಚಿವ, ಶಾಸಕ ಸುನೀಲ್ ಕುಮಾರ್ ಮಾತನಾಡಿ, ಎರಡು ಬಜೆಟ್ ನಲ್ಲಿ ಉಡುಪಿಗೆ ಯಾವುದೇ ಯೋಜನೆ ನೀಡಿಲ್ಲ. ಜಿಲ್ಲಾಡಳಿತ 240 ಕೋಟಿ ಮಳೆಹಾನಿ ಹೇಳಿದೆ. ಆದರೆ ಸರ್ಕಾರ ದಿವಾಳಿಯಾಗಿದ್ದು, ಒಂದು ಪೈಸೆ ಹಣವೂ ಬಿಡುಗಡೆ ಮಾಡಿಲ್ಲ. ಇದು ಕರಾವಳಿಯ ನಿರ್ಲಕ್ಷ್ಯವಲ್ಲದೆ ಮತ್ತಿನ್ನೇನು?. ಐದು ಜನ ಬಿಜೆಪಿ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಗ್ರಾಮೀಣ ರಸ್ತೆಗಳಲ್ಲಿ ಓಡಾಡುವ ಸ್ಥಿತಿ ಇಲ್ಲ. ರಸ್ತೆಗಳ ಪ್ಯಾಚ್ ವರ್ಕ್ ಗೂ ಹಣ ನೀಡಿಲ್ಲ. ಹತ್ತು ದಿನದಲ್ಲಿ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಇಲ್ಲದಿದ್ರೆ ಮೊದಲನೇ ಹಂತದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುತ್ತೇವೆ. ಎರಡನೇ ಹಂತದಲ್ಲಿ ಎರಡು ಜಿಲ್ಲೆಗಳಲ್ಲಿ ಜನಾಂದೋಲನ ಮಾಡಲಾಗುವುದು ಎಂದರು.
ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಗ್ಯಾರೆಂಟಿ ಯೋಜನೆಗಳ ನಂತರ ಬೆಲೆ ಏರಿಕೆ ಹೆಚ್ಚಳವಾಗುತ್ತಿದೆ. ಈಗ ಬಿಪಿಎಲ್ ಕಾರ್ಡ್ ರದ್ದು ಮಾಡಲುಮುಂದಾಗಿದೆ. ರಾಜ್ಯದಲ್ಲಿ ಸರ್ಕಾರವು 11 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ತಯಾರಿ ಮಾಡಲಾಗಿದೆ. ಉಡುಪಿಯಲ್ಲಿ 40,000 ಬಿಪಿಎಲ್ ಕಾರ್ಡ್ ರದ್ದತಿಗೆ ತಯಾರಿ ಮಾಡಿದೆ. ಗ್ಯಾರಂಟಿ ಯೋಜನೆ ತಲುಪಿಸಲಾಗದ ಅಸಹಾಯಕತೆಗೆ ಈ ಪದ್ಧತಿ ಅನುಸರಿಸುತ್ತಿದೆ. ಜನರನ್ನು ಸೌಲಭ್ಯಗಳಿಂದ ವಂಚಿಸುವ ಹುನ್ನಾರವನ್ನು ಖಂಡಿಸಿ ಕ್ಷೇತ್ರವಾರು ಪ್ರತಿಭಟನೆಗೆ ಬಿಜೆಪಿ ನಿರ್ಧಾರ ಮಾಡಿದೆ ಎಂದು ಹೇಳಿದರು.