ಹೆಣ್ಣಾಗಿ ಹುಟ್ಟುವುದು ಶಾಪವಲ್ಲ ಬದಲಾಗಿ ವರ: ವಂ|ಡೆನಿಸ್ ಡೆಸಾ

ಉಡುಪಿ: ಭೂಮಿ ತಾಯಿ ಹೆಣ್ಣು, ಜನ್ಮ ಕೊಟ್ಟ ತಾಯಿ ಹೆಣ್ಣು, ಹೆಂಡತಿಯಾಗಿ ಬರುವವಳು ಹೆಣ್ಣು, ಮಗಳಾಗಿ ಹುಟ್ಟುವವಳು ಹೆಣ್ಣು ನಮ್ಮ ಜೀವನದಲ್ಲಿ ಇವರೆಲ್ಲರ ಪಾತ್ರ ಮುಖ್ಯ ಹೀಗಿರುವಾಗ ಹೆಣ್ಣು ಮಗು ಹುಟ್ಟುವುದು ಶಾಪವಲ್ಲ ಬದಲಾಗಿ ವರ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂದನೀಯ ಡೆನಿಸ್ ಡೆಸಾ ಹೇಳಿದರು.

ಅವರು ಭಾನುವಾರು ಚರ್ಚಿನ ಸ್ತ್ರೀ ಸಂಘಟನೆ ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಸಮಾಜದಲ್ಲಿ ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಸುನೀತಾ ವಿಲಿಯಮ್ಸ್, ಸೈನಾ ನೆಹ್ವಾಲ್ ಸಿಂಧು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಸಾಧನೆಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಇಂದು ಪುರಷರಷ್ಟೇ ಸಮಾನರಾಗಿ ಹೆಣ್ಣು ಮಕ್ಕಳು ಸಾಧನೆಯನ್ನು ತೋರುತ್ತಿದ್ದಾರೆ. ಹೆಣ್ಣು ಮಕ್ಕಳೆ ತಮ್ಮ ರಕ್ಷಣೆಗೆ ತಾವು ಮುಂದಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಸ್ವತಂತ್ರವಾಗಿ ವಿಚಾರಿಸುವ, ನಿರ್ಧಾರ ಕೈಗೊಳ್ಳುವ ಅವಕಾಶ ಕಲ್ಪಿಸಬೇಕು ಎಂದರು.

ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಜೆನವಿವ್ ಕವಿತಾ ಕುಟಿನ್ಹೊ ಹೆಣ್ಣು ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಿದರು.
ಇದೇ ವೇಳೆ ಚರ್ಚಿನ ಮಹಿಳಾ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸ್ತ್ರೀ ಸಂಘಟನೆಯ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಗ್ರೇಸಿ ಕುವೆಲ್ಲೊ, ಕಲ್ಯಾಣಪುರ ವಲಯ ಅಧ್ಯಕ್ಷರಾದ ಮರೀನಾ ಲೂವಿಸ್, ತೊಟ್ಟಮ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್ ಉಪಸ್ಥೀತರಿದ್ದರು. ತೊಟ್ಟಂ ಘಟಕದ ಅಧ್ಯಕ್ಷರಾದ ಲೂಸಿ ಫೆರ್ನಾಂಡಿಸ್ ಸ್ವಾಗತಿಸಿ, ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ಹೆಣ್ಣು ಸಮಾಜದಲ್ಲಿ ಯಾವ ರೀತಿಯಲ್ಲಿ ಸೇವೆ ನೀಡುತ್ತಾಳೆ ಎನ್ನುವುದನ್ನು ಗೀತ ರೂಪಕದ ಮೂಲಕ ಪ್ರಸ್ತುತ ಪಡಿಸುವುದರೊಂದಿಗೆ ಆಕೆಯ ಮಹತ್ವವನ್ನು ತಿಳಿಸಿ ವಿಶಿಷ್ಠವಾಗಿ ಉದ್ಘಾಟನೆಯನ್ನು ನೆರವೇರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!