ಸುರತ್ಕಲ್: ಮಸೀದಿಗೆ ಕಲ್ಲು ತೂರಾಟ ಪ್ರಕರಣ -ಆರು ಮಂದಿಯ ಬಂಧನ
ಸುರತ್ಕಲ್: ಕೃಷ್ಣಾಪುರ ಮುಸ್ಲಿಮ್ ಜಮಾಅತ್‌ಗೆ ಒಳಪಡುವ ಕಾಟಿಪಳ್ಳ 3ನೇ ಬ್ಲಾಕ್‌ನ ಮಸ್ಜಿದುಲ್ ಹುದಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್ ಶೆಟ್ಟಿ(26), ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ ಶಿವಾನಂದ ಛಲವಾದಿ(19), ಹಳೆಯಂಗಡಿ ಚೇಳಾಯರು ಖಂಡಿಗೆಪಾಡಿ ನಿವಾಸಿ ನಿತಿನ್ ಹಡಪ(22), ಮುಂಚೂರು ನಿವಾಸಿ ಸುಜಿತ್ ಶೆಟ್ಟಿ(23), ಈಶ್ವರ ನಗರ ನಿವಾಸಿ ಮನು ಯಾನೆ ಅಣ್ಣಪ್ಪ(24) ಮತ್ತು ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಪ್ರೀತಂ ಶೆಟ್ಟಿ(34) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು, ಎರಡು ಬೈಕ್, ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಪೈಕಿ ಭರತ್ ಶೆಟ್ಟಿ ವಿರುದ್ಧ ಒಟ್ಟು 12 ಪ್ರಕರಣಗಳು, ಚೆನ್ನಪ್ಪನ ವಿರುದ್ಧ ಐದು, ನಿತಿನ್ ಮೇಲೆ ಒಂದು, ಮನು ಮತ್ತು ಪ್ರೀತಂ ಶೆಟ್ಟಿ ವಿರುದ್ಧ ತಲಾ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಜನತಾ ಕಾಲನಿ ಸ್ಮಶಾನದ ಕಡೆಯಿಂದ ಎರಡು ಬೈಕ್ ಗಳಲ್ಲಿ ಬಂದ ಕಿಡಿಗೇಡಿಗಳು ಮಸೀದಿಯ ಹಿಂಭಾಗದ ಕಿಟಕಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಬಳಿಕ ಒಂದು ಬೈಕ್ ನಲ್ಲಿದ್ದ ಮೂವರು ಗಣೇಶ ಕಟ್ಟೆಯ ಕಡೆ ತೆರಳಿದ್ದರೆ, ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರು ಬೈಕ್ ತಿರುಗಿಸಿಕೊಂಡು ವಾಪಸ್ ಸ್ಮಶಾನದ ಕಡೆಗೆ ಪರಾರಿಯಾಗಿದ್ದರು.