ಮಂಗಳೂರು: ಆ್ಯಪಲ್ ಐಫೋನ್‌ನಿಂದ ಗ್ರಾಹಕರಿಗೆ ತೊಂದರೆ- ಸೆ.17 ರಂದು ಮೊಬೈಲ್ ರಿಟೇಲರ್ಸ್‌ರಿಂದ ಪ್ರತಿಭಟನೆ
ಮಂಗಳೂರು, ಸೆ.16: ಆ್ಯಪಲ್ ಐಒಎಸ್ ಅಪ್ಡೇಟ್ ನಂತರ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆಯಿಂದ ನೊಂದ ಗ್ರಾಹಕರು ಆ್ಯಪಲ್ ನ ಸರ್ವಿಸ್ ಸೆಂಟರ್ ಗೆ ಭೇಟಿ ಮಾಡಿದರೆ ಉಡಾಫೆ ಉತ್ತರ ದೊರೆಯುತ್ತಿದೆ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ, ನಗರದಲ್ಲಿರುವ ಆ್ಯಪಲ್ ಮ್ಯಾಪಲ್ ಸರ್ವಿಸ್ ಸೆಂಟರ್ ವಿರುದ್ಧ ಸೆ.17ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ದ.ಕ. ಮತ್ತು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ತಿಳಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ನ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ. ಸುವರ್ಣ, ಅಂದು ಪೂರ್ವಾಹ್ನ 11 ಗಂಟೆಗ ಅಂಬೇಡ್ಕರ್ (ಜ್ಯೋತಿ) ಸರ್ಕಲ್ ನಿಂದ ಬೆಳಗ್ಗೆ ಆ್ಯಪಲ್ ಸರ್ವಿಸ್ ಸೆಂಟರ್ ಮ್ಯಾಪಲ್ ನ ಮೂಲಕ ಕ್ಲಾಕ್ ಟವರ್ ವರಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಹಲವು ನೊಂದ ಗ್ರಾಹಕರು ಪಾಲ್ಗೊಳ್ಳುತ್ತಿದ್ದಾರೆ ಹಾಗೂ ಮತ್ತು ಹಲವು ಸಮಸ್ಯೆಗೊಳಗಾದ ಗ್ರಾಹಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿ ಬೆಂಬಲ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಬಂದರೆ ಫ್ಲಿಪ್ ಕಾರ್ಟ್ ಅಥವಾ ಅಮೆಝಾನ್ ನಂತಹ ವಿದೇಶಿ ಕಂಪನಿಗಳು ಗ್ರಾಹಕರ ಹಿತರಕ್ಷಣೆಗೆ ನಿಲ್ಲುವುದಿಲ್ಲ. ಕೇವಲ ಸ್ಥಳೀಯ ಅಂಗಡಿಗಳು ಮಾತ್ರ ಗ್ರಾಹಕರ ಹಿತರಕ್ಷಣೆಗೆ ಮುಂದಾಗುತ್ತವೆ. ಈಗಾಗಲೇ ಆ್ಯಪಲ್ ನ ಈ ಸಮಸ್ಯೆಯಿಂದ ನೊಂದ ಹಲವು ಗ್ರಾಹಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಎಐ ಮೂಲಕ ಆ್ಯಪಲ್ ಫೋನ್ ಖರೀದಿಸುವ ಸಾಕಷ್ಟು ಗ್ರಾಹಕರು ಈ ಸಮಸ್ಯೆಯಿಂದ ಮಾಸಿಕ ಕಂತು ಪಾವತಿ ಮಾಡಲಾಗದೆ ಪರದಾಡುತ್ತಿದ್ದಾರೆ. ಈ ಕಾರಣದಿಂದ ಗ್ರಾಹಕರ ಪರವಾಗಿ ರಿಟೇಲರ್ಸ್ ಅಸೋಸಿಯೇಶನ್ ಹೋರಾಟ ನಡೆಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಮತ್ತು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ಚೇರ್ ಮೆನ್ ಗುರುದತ್ ಕಾಮತ್, ಅಧ್ಯಕ್ಷ ರಾಜೇಶ್ ಮಾಬಿಯಾನ್, ಕಾರ್ಯದರ್ಶಿ ಇಮ್ರಾನ್, ಸ್ಥಾಪಕ ಅಧ್ಯಕ್ಷ ಸಲೀಂ, ಮಾಜಿ ಅಧ್ಯಕ್ಷ ಶೈಲೇಂದ್ರ ಸರಳಾಯ, ಉಪಾಧ್ಯಕ್ಷ ಅಝರ್ ಮುಹಮ್ಮದ್ ಉಪಸ್ಥಿತರಿದ್ದರು.