ಕನ್ನಡ ಭಾಷೆ ನಾಡಿನ ಜನತೆಯ ಉಸಿರಾಗಲಿ: ಶ್ರೀಸುಗುಣೇಂದ್ರ ತೀರ್ಥ

Oplus_131072

ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ರಾಜಾಂಗಣದಲ್ಲಿ ಚಿತ್ರಕಲೆ ಸ್ಪರ್ಧೆ

ಉಡುಪಿ: ಕರ್ನಾಟಕ ನಾಮಕರಣಗೊಂಡು 50 ಸಂವತ್ಸರಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆ ನಾಡಿನ ಕನ್ನಡಿಗರ ಉಸಿರಾಗಲಿ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರ್ಟಿಸ್ಟ್ ಫೋರಂ ಸಹಯೋಗ ದೊಂದಿಗೆ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಕರ್ನಾಟಕದ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಭವ್ಯ ಭುವನೇಶ್ವರಿ ಮೂರ್ತಿಯನ್ನು ಮುಖ್ಯಮಂತ್ರಿಗಳು ಅನಾವರಣ ಮಾಡುವ ಕಾರ್ಯ ನವಂಬರ್‌ನಲ್ಲಿ ನಡೆಯಲಿದೆ. ಮಕ್ಕಳಿಗೆ ನಮ್ಮ ರಾಜ್ಯದ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಯ ಪಡಿಸುವ ಉದ್ದೇಶದಿಂದ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕರಾವಳಿ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹು ಭಾಷೆ, ಬಹು ಕಲೆ, ಸಂಸ್ಕೃತಿಯ ಈ ಕರಾವಳಿ ಭಾಗದಲ್ಲಿ ಮುಂದಿನ ತಿಂಗಳು ಮಂಗಳೂರಿನಲ್ಲಿ ನಡೆಯುವ ಬಹು ಸಂಸ್ಕೃತಿ ಉತ್ಸವಕ್ಕೆ ಪೂರಕವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ನಮ್ಮ ರಾಷ್ಟ್ರೀಯ ಹಬ್ಬಗಳು, ಆಚಾರ ವಿಚಾರ, ಸಂಸ್ಕೃತಿಯನ್ನು ಮೈಗೊಡಿಸಿಕೊಂಡು ಸುಸಂಸ್ಕೃತ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾಮಟ್ಟದ ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನ 3,೦೦೦ ರೂ., ದ್ವಿತೀಯ ಬಹುಮಾನ 2,೦೦೦ ರೂ., ತೃತೀಯ ಬಹುಮಾನ 1,೦೦೦ ರೂ. ನಗದು ಹಾಗೂ 5 ಸಮಾಧಾನಕರ ಬಹುಮಾನಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ಮಂಗಳೂರು ವಲಯ ಮಟ್ಟದ ಕಾರ್ಯಕ್ರಮದಲ್ಲಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಆರ್ಟಿಸ್ಟ್ ಫೋರಂ ಇವರಿಂದ ಸ್ಪರ್ಧೆ ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಆರ್ಟಿಸ್ಟ್ ಫೋರಂ ಉಡುಪಿ ಕಾರ್ಯದರ್ಶಿ ಸಕು ಪಾಂಗಾಳ, ಶ್ರೀಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀ ಕೃಷ್ಣಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!