ಪ್ರಧಾನಿಯಾಗಿ ಮೋದಿ ಹೆಚ್ಚು ದಿನ ಇರುವುದಿಲ್ಲ: ಪುನರುಚ್ಛರಿಸಿದ ಸುಬ್ರಮಣ್ಯನ್ ಸ್ವಾಮಿ
ಮಂಗಳೂರು: “ಪ್ರಧಾನಿ ಮೋದಿ ಹೆಚ್ಚು ದಿನ ಪ್ರಧಾನಿ ಸ್ಥಾನದಲ್ಲಿ ಇರುವುದಿಲ್ಲ. ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು,” ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ.
ಶನಿವಾರ ಮಂಗಳೂರಿನಿಂದ ಶೃಂಗೇರಿಗೆ ಹೋಗುವ ದಾರಿಮಧ್ಯೆ ಕಾರ್ಕಳದ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
“ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗ ಬಹುದು. ಅವರ ಹೆಸರನ್ನು ನಾನೇನಾದರೂ ಈಗ ಹೇಳಿದರೆ ಎಲ್ಲರೂ ಅವರ ಹಿಂದೆ ಬೀಳುತ್ತಾರೆ. ಅವರ ವ್ಯಕ್ತಿತ್ವ ಹಾಳು ಮಾಡಬಹುದು. ಯಾವಾಗ ಪ್ರಧಾನಿ ಕುರ್ಚಿ ಖಾಲಿಯಾಗುತ್ತೋ ಆವಾಗ ಆ ಬಗ್ಗೆ ಚರ್ಚೆ ಮಾಡೋಣ. ಯಾರೂ ಆ ಸ್ಥಾನಕ್ಕೆ ಸೂಕ್ತ ಎಂಬುದನ್ನು ನೋಡೋಣ”, ಎಂದರು.
ವರದಿಗಾರೊಬ್ಬರು, ಸುಬ್ರಮಣ್ಯನ್ ಸ್ವಾಮಿ ಅವರ ಗಮನವನ್ನು ನಾಗಮಂಗಲ ಘಟನೆಯ ಬಗ್ಗೆ ಸೆಳೆದರು. “ಬಾಂಗ್ಲಾದೇಶದಲ್ಲಿ ನಡೆದಂತೆ ಇಲ್ಲಿಯೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆಯ ಸಂದರ್ಭ ಮುಸ್ಲಿಮ್ ಸಂಘಟನೆಗಳು ಹಿಂದೂಗಳ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ರೀತಿಯ ಘಟನೆಗಳು ಪುನರಾವರ್ತನೆಯಾಗುತ್ತಿದೆ” ಎಂದರು.
ಕೂಡಲೇ ಪ್ರತಿಕ್ರಿಯಿಸಿದ ಸುಬ್ರಮಣ್ಯನ್ ಸ್ವಾಮಿ, “ಕೃತ್ಯವನ್ನು ಮುಸ್ಲಿಮರು ಮಾಡಿದ್ದು ಎನ್ನುವುದಕ್ಕೆ ನಿಮ್ಮಲ್ಲಿ ಪುರಾವೆ ಇದೆಯೇ?” ಎಂದು ಮರು ಪ್ರಶ್ನೆ ಹಾಕಿದ್ದಾರೆ. ವರದಿಗಾರ “ಕಲ್ಲೆಸೆತವೂ ನಡೆದಿದೆ” ಎಂದು ಸಮಜಾಯಿಷಿ ಕೊಡಲು ಪ್ರಯತ್ನಿಸಿದ್ದಾರೆ. ಆಗ ಸುಬ್ರಮಣ್ಯಯನ್ ಸ್ವಾಮಿ, “ನಿಮಗೆ ಹೇಗೆ ಗೊತ್ತು?” ಎಂದು ಕೇಳಿದ್ದಾರೆ.
ಮುಂದುವರೆದು, “ದೇವಸ್ಥಾನಕ್ಕೆ ದಾಳಿಯಾಗಿದೆ, ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದಕ್ಕೆ ನಿಮ್ಮಲ್ಲಿ ಪುರಾವೆ ಇದೆಯೇ? ಪುರಾವೆ ಇದ್ದರೆ ನನಗೆ ಕೊಡಿ. ನಾನು ಸುಪ್ರೀಂ ಕೋರ್ಟ್ ಗೆ ಹೋಗುತ್ತೇನೆ. ಅದಕ್ಕೆ ಬೇಕಾದ ಆದೇಶ ತರುತ್ತೇನೆ. ಸಾಕ್ಷ್ಯಗಳ ಸಹಿತ ನನಗೆ ಮಾಹಿತಿ ಕೊಡಿ. ಸಾಕ್ಷಾಧಾರಗಳು ಸರಿಯಿದ್ದರೆ, ನಿಮಗೆ ಬೇಕಾದ ಆದೇಶ ನಾನು ತರುತ್ತೇನೆ. ನಾನು ಸಿಎಂ ಜೊತೆ ಮಾತನಾಡುತ್ತೇನೆ. ನೀವು ಇದನ್ನು ಸರಿಪಡಿಸಿ, ಇಲ್ಲದಿದ್ದರೆ ನಾನು ಸುಪ್ರೀಂ ಕೋರ್ಟ್ ಗೆ ಹೋಗುತ್ತೇನೆ ಎಂದು ಅವರಿಗೆ ಹೇಳುತ್ತೇನೆ. ಆದರೆ ಯಾರೂ ಈ ರೀತಿ ಮಾಡುವುದಿಲ್ಲ. ಆರೋಪ ಮಾಡಿ ಸುಮ್ಮನಾಗುತ್ತಾರೆ” ಎಂದು ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ.