ಉಡುಪಿ: ಭ್ರಷ್ಟಾಚಾರ ಮತ್ತು ಕರ್ತವ್ಯಲೋಪ ನಾಲ್ವರು ಎಸ್ಐ ಸಹಿತ 80 ಪೊಲೀಸ್ ಸಿಬ್ಬಂದಿಗಳ ಅಮಾನತು
ಉಡುಪಿ, ಸೆ.14: ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದೇ ವರ್ಷದಲ್ಲಿ 4 ಮಂದಿ ಎಸ್‌ಐಗಳು ಸಹಿತ 80ಕ್ಕೂ ಅಧಿಕ ಎಎಸ್ಐ, ಹೆಡ್‌ಕಾನ್ಸ್ಟೇಬಲ್ ಮತ್ತು ಕಾನ್ಸ್‌ಟೇಬಲ್‌ಗಳನ್ನು ಉಡುಪಿ ಜಿಲ್ಲೆಯಲ್ಲಿ ಅಮಾನತು ಮಾಡಲಾಗಿದೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪೊಲೀಸರು ಅಮಾನತುಗೊಂಡಿದ್ದಾರೆ. ಜಿಲ್ಲೆಯ ದಕ್ಷ ಹಾಗೂ ಯಾವುದೇ ರಾಜಕೀಯ ವ್ಯಕ್ತಿಗಳ ಪ್ರಲೋಭೆಗೆ ಜಗ್ಗದ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ. ಅವರು ಪೊಲೀಸರ ಕರ್ತವ್ಯದ ಬಗ್ಗೆ ಅಧಿಕಾರ ವಹಿಸಿಕೊಂಡ ದಿನದಿಂದಲೇ ಹದ್ದಿನ ಕಣ್ಣಿಟ್ಟಿದ್ದರು. ಮಾತ್ರವಲ್ಲದೇ ಈ ಹಿಂದೆ ಸಿಬ್ಬಂದಿಗಳು ಹೇಗೆ ಕರ್ತವ್ಯ ನಿರ್ವಹಿಸಿದ್ದರು ಮುಖ್ಯವಲ್ಲ. ಇನ್ನು ಮುಂದೆ ಹೇಗೆ ಇರಬೇಕು ಎನ್ನುವುದು ಹಿರಿಯ ಅಧಿಕಾರಿಗಳ ಸಭೆ ಕರೆದು ಖಡಕ್ ವಾರ್ನಿಂಗ್ ನೀಡಿದ್ದರು.
ಒಂದು ವರ್ಷದಿಂದಲೂ ವಿವಿಧ ಕಾರಣಗಳಿಂದ ಕರ್ತವ್ಯಲೋಪ ಎಸಗಿದವರಿಗೆ ಅಮಾನತು ಹಾಗೂ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳ ಪೈಕಿ ಕೆಲವರ ಅಮಾನತು ಆದೇಶ ಮುಗಿದಿದೆ. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟಗಾರರೊಂದಿಗೆ ಶಾಮೀಲಾಗಿರುವುದು, ಲಂಚ ಪಡೆದಿರುವುದು, ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಎಸ್‌ಐಗಳನ್ನ ಅಮಾನತು ಮಾಡಲಾಗಿದೆ.
ಇದು ಹಂತಹಂತವಾಗಿ ನಡೆಯುವ ಪ್ರಕ್ರಿಯೆ. ಕರ್ತವ್ಯ ಲೋಪವೆಸಗಿದ ಕೆಲವರನ್ನು ಅಮಾನತು ಮಾಡಲಾಗಿದೆ. ಇಲಾಖೆಯನ್ನು ಬಲಪಡಿಸಲು ಮತ್ತು ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಆದ್ಯತೆ ನೀಡಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್ ಪಿ ಡಾ.ಅರುಣ್ ಕೆ ಅಭಿಪ್ರಾಯಪಟ್ಟರು.