ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ
ಉಡುಪಿ, ಸೆ.14: ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ ಎಂದರು.
ಅಕಾಡೆಮಿಯ ಗೌರವ ಪ್ರಶಸ್ತಿಗೆ 5 ಜನ ಸಾಧಕರು: ಬೆಳ್ತಂಗಡಿ ದಿನೇಶ್ ಅಮ್ಮಣ್ಣಾಯ, ಬೆಂಗಳೂರು ನಾರಾಯಣಪ್ಪ.ಎ.ಆರ್., ಪುತ್ತೂರು ಎಂ.ಜಬ್ಬಾರ್ ಸಮೋ, ಮುಂಬೈಯ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಬಂಟ್ವಾಳ ಚೆನ್ನಪ್ಪಗೌಡ ಸಜಿಪ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ. 50,000ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಪುರಸ್ಕರಿಸಲಾಗುವುದು.
ಅಕಾಡೆಮಿಯ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ 10 ಸಾಧಕರು: ರಘುನಾಥ ಶೆಟ್ಟಿ ಬಾಯಾರು, ದಿವಾಕರ ದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ ಮರಕಾಲ, ಶಿರಳಗಿ ತಿಮ್ಮಪ್ಪ ಹೆಗಡೆ, ಬಾಬು ಕುಲಾಲ್ ಹಳ್ಳಾಡಿ, ಶಿವಯ್ಯ, ಜೀಯಪ್ಪ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000 ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಪುರಸ್ಕರಿಸಲಾಗುವುದು.
ದತ್ತಿನಿಧಿ ಪ್ರಶಸ್ತಿ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ರೂ.25,000 ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಹಾಗೂ ಫಲ ತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.
2022ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ವಿದ್ವಾನ್ ಗಣಪತಿ ಭಟ್, ಡಾ.ಮನೋರಮಾ.ಬಿ.ಎನ್ ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಡಾ.ಸತೀಶ್.ಜಿ.ನಾಯ್ಕ, ಹೆಚ್.ಸುಜಯೀಂದ್ರ ಹಂದೆ, ಕೋಟ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ ರೂ. 25,000 ನಗದು, ಪ್ರಶಸ್ತಿ ಫಲಕ ನೀಡಿ ಪುರಸ್ಕರಿಸಲಾಗುವುದು.
2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 2ನೇ ಅಥವಾ 3ನೇ ವಾರದಲ್ಲಿ ಮಂಗಳೂರು ಟೌನ್‌ಹಾಲ್ ಇಲ್ಲಿ ನಡೆಸಲಾಗುವುದು. ಇಲಾಖಾ ಸಚಿವರು, ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕವನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.