ದೆಹಲಿ ಅಬಕಾರಿ ನೀತಿ ಹಗರಣ: 6 ತಿಂಗಳ ಬಳಿಕ ಸಿಎಂ ಕೇಜ್ರಿವಾಲ್’ಗೆ ಜಾಮೀನು ಮಂಜೂರು
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲುಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
6 ದಿನಗಳ ಬಳಿಕ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಈ ತೀರ್ಪು ನೀಡಿದೆ.ನ್ಯಾಯಪೀಠವು ಕೇಜ್ರಿವಾಲ್ ಅವರಿಗೆ 10 ಲಕ್ಷ ರೂ ಬಾಂಡ್, ಎರಡು ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರೂ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ್ದು ಸಿಂಧುವೇ ಆಗಿದ್ದು, ಅದು ಸಂಬಂಧಿತ ಕಾರ್ಯವಿಧಾನದ ಕಾನೂನುಗಳ ಅನುಸಾರವಾಗಿಯೇ ಇದೆ ಎಂದು ತಿಳಿಸಿದೆ.
ಸಿಬಿಐ ತಮ್ಮನ್ನು ಬಂಧಿಸಿರುವುದರ ಸಿಂಧುತ್ವ ಹಾಗೂ ತಮಗೆ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್ ಅವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಇದರಂತೆ ಎರಡನೇ ಅರ್ಜಿಗೆ ಸಮ್ಮತಿಸಿರುವ ನ್ಯಾಯಾಲಯ ಮೊದಲನೆಯ ಅರ್ಜಿಯನ್ನು ತಿರಸ್ಕರಿಸಿದೆ. ಈಗಾಗಲೇ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ವ್ಯಕ್ತಿಯನ್ನು ತನಿಖೆಯ ಉದ್ದೇಶಕ್ಕಾಗಿ ಬಂಧಿಸಲು ಯಾವುದೇ ಅಡ್ಡಿಯಿಲ್ಲ. ಸಿಬಿಐ ತಮ್ಮ ಅರ್ಜಿಯಲ್ಲಿ ನ್ಯಾಯಾಂಗದ ಆದೇಶವಿದ್ದುದರಿಂದ ಬಂಧನ ಮಾಡಬೇಕಾಯಿತು ಎಂದು ತಿಳಿಸಿದೆ.
ಇದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 (ಎ) (3) ಉಲ್ಲಂಘನೆಯಲ್ಲ ಎಂದು ನ್ಯಾಯಾಲಯ ವಿವರಿಸಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಾರೆಂಟ್ ಹೊರಡಿಸಿದ್ದಾಗ ತನಿಖಾ ಸಂಸ್ಥೆ ಅದಕ್ಕೆ ಕಾರಣ ನೀಡುವುದರಿಂದ ಮುಕ್ತವಾಗಿರುತ್ತದೆ. ಅರ್ಜಿದಾರ ಬಂಧನ ಯಾವುದೇ ಕಾರ್ಯವಿಧಾನದ ಲೋಪದಿಂದ ಬಳಲುತ್ತಿಲ್ಲ. ಹೀಗಾಗಿ ಬಂಧನ ಮಾನ್ಯವಾಗಿದೆ ಎಂದು ಹೇಳಿದೆ.
ಇದೇ ವೇಳೆ ವಿಚಾರಣೆಗೆ ವಿನಾಯಿತಿ ನೀಡದ ಹೊರತು ಪ್ರಸ್ತುತ ಪ್ರಕರಣದ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದಂತೆ ಕೇಜ್ರಿವಾಲ್‌ಗೆ ನ್ಯಾಯಾಲಯ ಸೂಚನೆ ನೀಡಿದೆ.