ಉಡುಪಿ: ರಾಜಾಂಗಣದಲ್ಲಿ ಸೆ.13-20 ಯಕ್ಷ ಪಂಚಮಿ- 2024

ಉಡುಪಿ: ಹಟ್ಟಿಯಂಗಡಿಯ ಶ್ರೀಕೃಪಾಪೋಷಿತ ಯಕ್ಷಗಾನ ಮಂಡಳಿಯು, ಪರ್ಯಾಯ ಪುತ್ತಿಗೆ ಮಠ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಸಹಯೋಗದೊಂದಿಗೆ 6ನೇ ವರ್ಷದ ‘ಯಕ್ಷ ಪಂಚಮಿ -2024’ನ್ನು ಸೆ.13ರಿಂದ 20ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದೆ ಎಂದು ಮೇಳದ ಸ್ಥಾಪಕ ರಂಜಿತ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಇಂದು ಸಂಜೆ 7ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿಗಳಾದ ಮನೋಹರ ಶೆಟ್ಟಿ, ಗೋಪಾಲ ಸಿ. ಬಂಗೇರ, ರಂಜನ್ ಕಲ್ಕೂರ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮುಂತಾದವರು ಉಪಸ್ಥಿತರಿರುವರು ಎಂದರು.

ಸಮಾರೋಪ ಸಮಾರಂಭವು ಸೆ.19ರ ಸಂಜೆ ನಡೆಯಲಿದ್ದು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ, ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣಪ್ರಸಾದ್ ಅಡ್ಯಂತಾಯ, ಚಂದ್ರಶೇಖರ ಶೆಟ್ಟಿ ಶಿರಿಯಾರ ಹಾಗೂ ಡಾ.ಆಕಾಶ್‌ ರಾಜ್ ಜೈನ್ ಉಪಸ್ಥಿತರಿರುವರು ಎಂದರು.

ಈ ಬಾರಿ ಒಟ್ಟು ಐದು ಯಕ್ಷಗಾನ ಪ್ರದರ್ಶನವನ್ನು ಹಟ್ಟಿಯಂಗಡಿ ಮೇಳದ ಕಲಾವಿದರು ನೀಡಲಿದ್ದಾರೆ. 13ರಂದು ಬಬ್ರುವಾಹನ ಕಾಳಗ, 16ರಂದು ನರಕಾಸುರ ವಧೆ, 17ರಂದು ಅಹಲ್ಯೋದ್ಧಾರಣ, 19ರಂದು ಕೃಷ್ಣಾರ್ಜುನ ಹಾಗೂ 20ರಂದು ಭಾರ್ಗವ ವಿಜಯ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಹಾಗೂ ಮುಂಬಯಿಯ ಉದ್ಯಮಿ ವೆಂಕಟೇಶ ಪೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!