ಪರಶುರಾಮನ ಪ್ರತಿಮೆ ವಿಚಾರ- ಉಪ್ಪು ತಿಂದವ ನೀರು ಕುಡಿಯಲೇ ಬೇಕು: ಮುನಿಯಾಲ್ ಉದಯ್ ಶೆಟ್ಟಿ
ಕಾರ್ಕಳ, ಸೆ.12: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು ಅಲ್ಲದೆ ಇದೇ ವಿಚಾರವಾಗಿ ಅರ್ಜಿದಾರರ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಶೀಘ್ರ ಸತ್ಯಾಸತ್ಯತೆ ಹೊರಬರಲ್ಲಿದ್ದು ಉಪ್ಪು ತಿಂದವ ನೀರು ಕುಡಿಯಲೇ ಬೇಕು ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ ಶೆಟ್ಟಿ ಹೇಳಿದ್ದಾರೆ.
ನಿರಂತರವಾಗಿ ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದ್ದೆ ಸರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾರ್ಕಳ ಶಾಸಕರಿಗೆ ಇದೀಗ ಇರುಸು ಮುರಸಾಗಿದೆ.
ಸಾರ್ವಜನಿಕರ ಹಣ ಲೂಟಿ….
ಪ್ರತಿಮೆ ನಿರ್ಮಾಣಕ್ಕೆ ಯಾವ ವಸ್ತು ಬಳಸಲು ಹೇಳಲಾಗಿತ್ತು ಎಂದು ಕೇಳಿದಾಗ ವಕೀಲರ ಸ್ಪಷ್ಟನೆ ಒಪ್ಪದ ನ್ಯಾಯಮೂರ್ತಿಗಳು, ಕಂಚಿನ ಬದಲು ಬೇರೆ ವಸ್ತು ಬಳಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಂಚಾಗಿ ಪರಿವರ್ತಿಸಲು ತಾಮ್ರ ಮತ್ತು ಹಿತ್ತಾಳೆ ಬಳಸಲಾಗಿದೆ ಎಂದು ಹಿರಿಯ ವಕೀಲರು ಉತ್ತರಿಸುತ್ತಿದ್ದಂತೆ ಸಿಟ್ಟಿಗೆದ್ದ ನ್ಯಾಯಮೂರ್ತಿಗಳು ಪ್ರತಿಮೆನಿರ್ಮಾಣದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ಕಾರ್ಕಳ ಬಿಜೆಪಿಗರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ.
ಅಹಂಕಾರ ಬಿಡಿ ಕ್ಷಮೆ ಕೇಳಿ….
ತಪ್ಪು ಕೆಲವೊಮ್ಮೆ ಎಲ್ಲರಿಂದಲೂ ನಡೆಯುತ್ತದೆ. ಆದರೆ ತಾನೆ ಮಾಡಿದ್ದು ಸರಿ ಎನ್ನುವ ಅಹಂಕಾರ ಸಲ್ಲದು. ಪ್ರಧಾನಿಗಳೇ ಕ್ಷಮೆ ಯಾಚಿಸಿರುವಾಗ ಕಾರ್ಕಳದ ಶಾಸಕರಿಗೆ ಅಹಂಕಾರ ಏಕೆ. ರಾಜಕೀಯ ಲಾಭಕ್ಕಾಗಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ. ನಿಮ್ಮ ನಿಜ ಬುದ್ಧಿ ಜನರಿಗೆ ಅರಿವಾಗಿದೆ. ಇನ್ನಾದರೂ ದುರಂಕಾರ ಬಿಟ್ಟು ತಪ್ಪು ಒಪ್ಪಿಕೊಳ್ಳಿ ಒಟ್ಟಾಗಿ ಅಸಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುವುದರಲ್ಲಿ ನಿರಂತರ ಸಹಕಾರಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.