ಕೆಟ್ಟ ಸರಕಾರ ಎಂಬ ಜನರ ಆಕ್ಷೇಪ ಮುಚ್ಚಿ ಹಾಕಲು ನಾಗಮಂಗಲದ ಗಲಭೆ?- ಶೋಭಾ ಕರಂದ್ಲಾಜೆ
ಬೆಂಗಳೂರು, ಸೆ.12: ನಾಗಮಂಗಲದ ಘಟನೆ ಕುರಿತು ಎನ್‍ಐಎ ಮೂಲಕ ತನಿಖೆ ಮಾಡಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎನ್‍ಐಎ ತನಿಖೆ ಮಾಡಿದರೆ ಮಾತ್ರ ಸತ್ಯಾಂಶ ಹೊರಕ್ಕೆ ಬರಲಿದೆ ಎಂದು ನುಡಿದರು. ನಾಗಮಂಗಲದ ಘಟನೆಯಿಂದ ನಮ್ಮೆಲ್ಲ ಹಿಂದೂಗಳಿಗೆ ಅಪಮಾನ ಆಗಿದೆ. ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಚಪ್ಪಲಿ ಎಸೆದಿದ್ದಾರೆ. ಜೊತೆಗೆ ಕಲ್ಲೆಸೆದಿದ್ದಾರೆ. ಅಲ್ಲದೆ, ನಮ್ಮ ಅಂಗಡಿಗಳನ್ನು ಸುಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಆದರೂ ಅಲ್ಲಿನ ಸಚಿವರು, ಗೃಹ ಸಚಿವರು ಇದೊಂದು ಚಿಕ್ಕ ಘಟನೆ ಎಂದಿದ್ದಾರೆ ಎಂದರಲ್ಲದೆ, ಇನ್ನು ದೊಡ್ಡದು ಏನಾಗಬೇಕಿತ್ತು ನಿಮಗೆ ಎಂದು ಪ್ರಶ್ನಿಸಿದರು. ಹಿಂದೂಗಳ 25 ಅಂಗಡಿ ಸುಟ್ಟದ್ದು ನಿಮಗೆ ಚಿಕ್ಕ ಘಟನೆಯಾಗಿ ಕಂಡರೆ ಇನ್ನು ದೊಡ್ಡ ಘಟನೆ ಏನಾಗಬೇಕಾಗಿತ್ತು ಎಂದು ಕೇಳಿದರು.
ಸಿದ್ದರಾಮಯ್ಯನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳಿಗೆ ಅಪಮಾನ ಮಾಡುವಂಥದ್ದು ನಡೆಯುತ್ತಿದೆ. ತನ್ನ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಇಂಥ ಕೆಲಸ ಮಾಡುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಟೀಕಿಸಿದರು.ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ; ಸಚಿವರ ಮೇಲೂ ಭ್ರಷ್ಟಾಚಾರದ ದೂರುಗಳಿವೆ. ಇಷ್ಟೊಂದು ಕೆಟ್ಟ ಸರಕಾರ ಎಂದು ಜನರು ಮಾತನಾಡುವ ಸಂದರ್ಭದಲ್ಲಿ ಅದನ್ನು ಮುಚ್ಚಿ ಹಾಕಲು ನೀವೇನಾದರೂ ಗಲಭೆ ಮಾಡುತ್ತಿದ್ದೀರಾ ಎಂದು ಕೇಳಿದರು