ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಬಲ- ಆರ್.ಅಶೋಕ್
ಬೆಂಗಳೂರು, ಸೆ.12:ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಬಲವಿದೆ ಪೋಷಣೆ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಕೋಮು ಗಲಬೆ ವಿಚಾರವಾಗಿ ಅವರು ಸಾಮಾಜಿಕ ಖಾತೆ ಎಕ್ಸ್ ಮೂಲಕ ಸರ್ಕಾರದ ವಿರುದ್ಧ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಣ್ಮರೆಯಾಗಿರುವ ಕಾನೂನು ಸುವ್ಯವಸ್ಥೆಗೆ ಮತ್ತೂಂದು ನಿದರ್ಶನವಾಗಿದೆ. ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತಹುದೇ ಘಟನೆ ನಡೆದಿದ್ದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಮುಸ್ಲಿಂ ಮತಾಂಧ ಪುಂಡರು ಪೂರ್ವನಿಯೋಜಿತವಾಗಿ ದಾಂಧಲೆ ಎಬ್ಬಿಸಿ ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಚಪ್ಪಲಿ ಎಸೆಯುವುದು, ಪೆಟ್ರೋಲ್ ಬಾಂಬ್ ಸ್ಫೋಟಿಸುವುದು, ತಲ್ವಾರ್ ಝಳಪಿಸುವಂ ತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಅಂದರೆ ರಾಜ್ಯದಲ್ಲಿ ಇಂತಹ ಮತಾಂಧ ಪುಂಡರಿಗೆ, ಮುಸ್ಲಿಂ ಮೂಲಭೂತ ವಾದಿಗಳಿಗೆ ಕಾನೂನಿನ ಭಯವೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ.
ಅಷ್ಟೇ ಅಲ್ಲದೆ, ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದವರ ಮೇಲೆಯೇ ಈ ಮತಾಂಧ ಪುಂಡರು ಹಲ್ಲೆ, ದಬ್ಬಾಳಿಕೆ ನಡೆಸುತ್ತಾರೆ ಅಂದರೆ ಈ ದುಷ್ಟರ ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪ್ರೋತ್ಸಾಹ, ಪೋಷಣೆ ದೊರಕುತ್ತಿದೆ ಎಂದು ಊಹಿಸಿಕೊಳ್ಳಿ. ಎಂಬುವುದಾಗಿ ಸಾಮಾಜಿಕ ಖಾತೆ ಎಕ್ಸ್‌ನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.