ತೆರಿಗೆ ಹಂಚಿಕೆಯಲ್ಲಿ ತಾರತಮ್ಯ: 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ!
ಬೆಂಗಳೂರು: ಕೇಂದ್ರದ ತೆರಿಗೆ ಆದಾಯ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ವಿಚಾರದಲ್ಲಿ ಮತ್ತೆ ಹೋರಾಟ ಸಂಘಟಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಜತೆಗೆ, ಕಡಿಮೆ ತೆರಿಗೆ ಪಾಲು ಪಡೆಯುತ್ತಿರುವ ಬಿಜೆಪಿ ಆಡಳಿತದ ರಾಜ್ಯಗಳನ್ನೂ ಈ ಹೋರಾಟಕ್ಕೆ ತರಲು ರಾಜ್ಯ ಕಾಂಗ್ರೆಸ್ ಮುಂದಾಗಿದೆ.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನದಡಿ ಪತ್ರ ಬರೆದಿದ್ದಾರೆ. ಈ ಅನ್ಯಾಯದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅತಿಹೆಚ್ಚು ತೆರಿಗೆ ಪಾವತಿಸಿಯೂ ಕಡಿಮೆ ಪಾಲು ಪಡೆಯುತ್ತಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಮಾಹಿತಿಯನ್ನು ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಪತ್ರದ ಪ್ರತಿಯನ್ನು ಲಗತ್ತಿಸಿದ್ದಾರೆ.
ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದು, ಆರ್ಥಿಕತೆ ಮತ್ತು ಇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಮಾಡಿರುವ ಕರ್ನಾಟಕದಂತಹ ಹಲವು ರಾಜ್ಯಗಳನ್ನು ಅವುಗಳ ಸಾಧನೆಯ ಕಾರಣಕ್ಕೇ ದಂಡಿಸಲಾಗುತ್ತಿದೆ. ಇದರ ವಿರುದ್ಧ ದನಿ ಎತ್ತಬೇಕಿದೆ ಎಂದಿದ್ದಾರೆ. ಈ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗುತ್ತದೆ. ಸಭೆಯ ದಿನಾಂಕ ಮತ್ತು ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ. ತೆರಿಗೆ ಅನ್ಯಾಯವನ್ನು ಸರಿಪಡಿಸಿ ಎಂದು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸಲು ತಾವೆಲ್ಲರೂ ಆ ಸಭೆಯಲ್ಲಿ ಭಾಗಿಯಾಗಬೇಕು’ ಎಂದು ಕೋರಿದ್ದಾರೆ.
16ನೇ ಹಣಕಾಸು ಆಯೋಗದ ಸಮಾಲೋಚನೆ ಆರಂಭವಾಗಿದೆ .ಕರ್ನಾಟಕ ಮತ್ತು ಇತರೆ ತಲಾವಾರು ಜಿಎಸ್ಡಿಪಿ ಹೆಚ್ಚಿರುವ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಗಾಗಿ ದಂಡವನ್ನು ಅನುಭವಿಸುತ್ತಿವೆ,ಅಸಮಾನವಾಗಿ ಕಡಿಮೆ ತೆರಿಗೆ ಹಂಚಿಕೆಗಳನ್ನು ಪಡೆಯುತ್ತಿವೆ. ಈ ಅನ್ಯಾಯದ ನಡೆ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತೆ. ಪ್ರಗತಿಪರ ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತೆ ಎಂದಿದ್ದಾರೆ.
ಹಣಕಾಸು ಆಯೋಗವು ಬದಲಾವಣೆಯನ್ನು ಮಾಡುವ ಹಾಗೂ ಬೆಳವಣಿಗೆ ಮತ್ತು ಉತ್ತಮ ತೆರಿಗೆ ಕ್ರೋಢೀಕರಣ ಕ್ಕಾಗಿ ಉತ್ತೇಜಕಗಳನ್ನು ರಚಿಸುವ ಅಗತ್ಯವಿರುವಾಗ ಹಣಕಾಸಿನ ಒಕ್ಕೂಟದ ಸಮಸ್ಯೆಗಳ ಕುರಿತು ಒಟ್ಟಾಗಿ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ನಾನು ಅವರನ್ನು ಆಹ್ವಾನಿಸಿದ್ದೇನೆ ಎಂದು ತಿಳಿಸಿದ್ದಾರೆ. ಗುರುವಾರ ತಿರುವನಂತಪುರಂನಲ್ಲಿ ನಡೆಯಲಿರುವ ದಕ್ಷಿಣ ಭಾರತದ ಹಣಕಾಸು ಸಚಿವರ ಸಭೆಯಲ್ಲಿ ಭಾಗವಹಿಸಲಿರುವ ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಮೇಲಿನ ಸಂದೇಶವನ್ನು ಸಂಬಂಧಪಟ್ಟವರಿಗೆ ತಿಳಿಸಲಿದ್ದಾರೆ.