ಉದ್ಯಮಿಗಳನ್ನು ಅಪಹರಿಸಿ ಸುಲಿಗೆ: ನಾಲ್ವರು GST ಅಧಿಕಾರಿಗಳ ಬಂಧನ
ಬೆಂಗಳೂರು: ನಾಲ್ವರನ್ನು ಅಪಹರಿಸಿ 1.5 ಕೋಟಿ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರು ಕೇಂದ್ರ ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಮತ್ತು ಬೆಂಗಳೂರು ಪೂರ್ವವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕೇಂದ್ರ ತೆರಿಗೆ ಅಧೀಕ್ಷಕ ಅಭಿಷೇಕ್, ಬೆಂಗಳೂರು ವಲಯ ದಕ್ಷಿಣ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಜಿಎಸ್ಟಿ ಗುಪ್ತಚರ ಅಧಿಕಾರಿಗಳಾದ ಮನೋಜ್ ಸೈನಿ, ನಾಗೇಶ್ ಬಾಬು ಮತ್ತು ಜಿಎಸ್ಟಿ ಇಂಟೆಲಿಜೆನ್ಸ್ ನ ಸೋನಾಲಿ ಸಹಾಯ್ ಬಂಧಿತ ಆರೋಪಿಗಳು.
ಆರೋಪಿಗಳ ವಿರುದ್ಧ ಜಿಎಂ ಪಾಳ್ಯದ ನಿವಾಸಿ ಉದ್ಯಮಿ ಕೇಶವ್ ತಕ್(35) ಅವರ ದೂರಿನ ಮೇರೆಗೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಅಪಹರಣ, ಅಕ್ರಮ ಬಂಧನ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರ ನಿರ್ದೇಶನದ ಮೇರೆಗೆ ಪ್ರಕರಣವನ್ನು ಇದೀಗ ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ.
ಆರೋಪಿಗಳು ಆ.30 ರಂದು ಕೇಶವ್ ಅವರ ಮನೆಯ ಮೇಲೆ ಅನಧಿಕೃತ ದಾಳಿ ನಡೆಸಿ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ವಶಪಡಿಸಿ ಕೊಂಡಿದ್ದರು. ಈಡಿ ಮತ್ತು ಜಿಎಸ್‌ಟಿ ಇಲಾಖೆಗಳಿಂದ ಬಂದವರು ಎಂದು ಹೇಳಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಇದಲ್ಲದೆ ಕೇಶವ್, ಮುಖೇಶ್ ಜೈನ್, ಪವನ್ ತಕ್ ಮತ್ತು ರಾಕೇಶ್ ಮನಕ್ ಚಂದಾನಿ ಅವರನ್ನು ಆರೋಪಿಗಳು ಅಪಹರಿಸಿ ಆ.30ರಿಂದ ಸೆ.1ರವರೆಗೆ ಅಕ್ರಮವಾಗಿ ಕೂಡಿಟ್ಟಿದ್ದರು.
ಉದ್ಯಮಿಗಳಮ ಬಿಡುಗಡೆಗೆ 1.5 ಕೋಟಿ ರೂ. ಬೇಡಿಕೆಯನ್ನಿಟ್ಟಿದ್ದು, ಇಂದಿರಾನಗರಕ್ಕೆ ಬಲವಂತವಾಗಿ ಕರೆದೊಯ್ದಿದ್ದರು. ಕೇಶವ್ ಸ್ನೇಹಿತ ರೋಷನ್ ಜೈನ್‌ಗೆ ವಾಟ್ಸಾಪ್ ಕರೆ ಮಾಡಿ 3 ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಹಣದ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದಾಗ ಆರೋಪಿಗಳು ಕೇಶವ್ ಮತ್ತು ಇತರ ಮೂವರನ್ನು ಜೀವನ್ ಬಿಮಾ ನಗರದಲ್ಲಿರುವ ಕಚೇರಿಗೆ ಕರೆದೊಯ್ದು ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ.
ಮರುದಿನ ವಿವಿಧೆಡೆ ನಮ್ಮನ್ನು ಕರೆದುಕೊಂಡು ಹೋಗಲಾಗಿದೆ. ಆರೋಪಿಗಳು ಮತ್ತೆ ಹಣಕ್ಕಾಗಿ ತನ್ನ ಸ್ನೇಹಿತರಿಗೆ ಕರೆ ಮಾಡುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ಒಂದೂವರೆ ಕೋಟಿ ರೂ. ನೀಡಿದ ಬಳಿಕ ನಮ್ಮನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೆ ಮುನ್ನ ಆರೋಪಿಗಳು ಕೆಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಹಾಕಿಸಿದ್ದು, ಮಹಜರ್ ಪ್ರತಿಯನ್ನು ನೀಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇಶವ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ 32 ಮೊಬೈಲ್ ಫೋನ್‌ಗಳು, 50 ಚೆಕ್ ಬುಕ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.