ನಾಗಮಂಗಲ: ಗಣೇಶ ವಿಸರ್ಜನಾ ಮೆರವಣಿಗೆಗೆ ಕಲ್ಲು ತೂರಾಟ- 46 ಮಂದಿ ಬಂಧನ
ಮಂಡ್ಯ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿ, ನಲುಗಿ ಹೋಗಿರುವ ನಾಗಮಂಗಲದಲ್ಲಿ ಪ್ರಸ್ತುತದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕರಣ ಸಂಬಂಧ ಈ ವರೆಗೂ 46 ಮಂದಿಯನ್ನು ಬಂಧಿಸಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಚೆಲುವರಾಯಸ್ವಾಮಿಯವರು, ನಮ್ಮ ನಾಗಮಂಗಲ ಶಾಂತಿ, ಸೌಹಾರ್ದತೆಯ ನೆಲೆ. ಇಲ್ಲಿ ಅಶಾಂತಿ ಮೂಡಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ತಪ್ಪು ಮಾಡಿರುವವರ ವಿರುದ್ಧ ಕ್ರಮ ಆಗುತ್ತದೆ. ಸಾರ್ವಜನಿಕರು ಯಾವುದೇ ವದಂತಿ ಪ್ರೇರಣೆಗಳಿಗೆ ಕಿವಿಗೊಡದೆ ಶಾಂತಿ ಮರುಸ್ಥಾಪನೆಗೆ ಸಹಕರಿಸಬೇಕೆಂದು ಕೋರುತ್ತೇನೆ. ಘಟನೆ ತಿಳಿದ ತಕ್ಷಣವೇ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿ, ವರದಿ ಪಡೆದಿದ್ದೇನೆ. ಎಲ್ಲಾ ತಪ್ಪಿತಸ್ಥರ ಬಂಧನಕ್ಕೆ ಸೂಚಿಸಿದ್ದು ಶಾಂತಿ ಮರುಸ್ಥಾಪನೆಗೆ ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಸೆಕ್ಷನ್ 144 ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ ನಷ್ಟ, ಪ್ರಾಣಹಾನಿಯಾಗದಂತೆ ನೋಡಿಕೊಳ್ಳಿ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ. ಆ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
40 ವರ್ಷಗಳಿಂದ ನಾನು ಶಾಸಕನಾಗಿದ್ದೇನೆ. ಹಿಂದೆ ಬೇರೆ ಕಾರಣಕ್ಕೆ ಹಿಂದೂ-ಮುಸ್ಲಿಂ ಗಲಾಟೆ ಆಗಿತ್ತು. ಆದರೆ, ಈ ರೀತಿ ಘಟನೆ ಆಗಿರಲಿಲ್ಲ. ಬಹಳ ವರ್ಷಗಳಿಂದ ಹೀಗಾಗಿರಲಿಲ್ಲ. ದುರದೃಷ್ಟವಶಾತ್ ಈ ಘಟನೆ ಆಗಿದೆ. ಪ್ರಕರಣ ನಿಯಂತ್ರಣಕ್ಕೆ ತರುವ ಕೆಲಸ ಆಗುತ್ತಿದೆ. ಯಾವುದೇ ಅನಾಹುತ ಆಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮವಹಿಸಲಿದೆ ಎಂದರು.
ಮಂಡ್ಯ ಎಸ್’ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಮಾತನಾಡಿ, ಘಟನೆ ಸಂಬಂಧ ಈ ವರೆಗೂ 46 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್’ಡಿ.ಕುಮಾರಸ್ವಾಮಿಯವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ.
ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ.
ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ; ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.