ಉಡುಪಿ: ಸುಳ್ಳು ಮಾಹಿತಿ ನೀಡಿ BPL ಪಡಿತರ ಕಾರ್ಡ್ ಪಡೆದ ಕುಟುಂಬಕ್ಕೆ ಶಾಕ್!
ಉಡುಪಿ, ಆ.12: ಜಿಲ್ಲೆಯಲ್ಲಿ ಶೇ.85ರಷ್ಟು ಬಿಪಿಎಲ್ ಪಡಿತರ ಕಾರ್ಡುಗಳಿದ್ದು, ಒಟ್ಟು 1.92 ಲಕ್ಷ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಅವುಗಳ ನೈಜತೆ ಕುರಿತಂತೆ ಈಗ ಸರ್ವೆ ನಡೆಸಲಾಗುತ್ತಿದೆ. ಅದನ್ನು ಶೇ.40ಕ್ಕೆ ಇಳಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ಪ್ರತಿಯೊಬ್ಬ ಕಾರ್ಡುದಾರರ ಆದಾಯ ಹಾಗೂ ಇತರ ವಿಷಯಗಳ ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಬಿಪಿಎಲ್ ಕಾರ್ಡ್ ಪಡೆದಿರುವ ಸರಕಾರಿ ನೌಕರರಿಂದ ಕಾರ್ಡ್ ಹಿಂಪಡೆದು ದಂಡ ವಸೂಲಿ ಮಾಡಲಾಗುತ್ತದೆ ಎಂದರು.
ಈ ವೇಳೆ ಬಡ, ನೈಜ ಫಲಾನುಭವಿಗಳಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಲಾಗುವುದು. ಕಾನೂನಿಗೆ ವಿರುದ್ಧವಾಗಿ ಬಿಪಿಎಲ್ ಕಾರ್ಡ್ ಪಡೆದವರು ಸುವೋಮೋಟೊ ಆಗಿ ಕಾರ್ಡ್‌ನ್ನು ಹಿಂದಿರುಗಿಸಿ ಎಂದು ಮನಿ ಮಾಡಿದ ಅವರು, ಬೇಕಿದ್ದರೆ ತಮ್ಮ ಅಗತ್ಯತೆಗಾಗಿ ಎಪಿಎಲ್ ಕಾರ್ಡು ಪಡೆದುಕೊಳ್ಳಬಹುದು. ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ನ ದುರುಪಯೋಗವಾಗದಂತೆ ನೋಡಿಕೊಳ್ಳಲಾಗುವುದು. ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿರುವುದು ಕಂಡುಬಂದರೆ ಕ್ರಮ ಜರಗಿಸಲಾಗುವುದು ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯ ಕೆಲವರಿಗೆ ಹಣ ಬಾರದಿರುವ ಕುರಿತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದಾಗ, ಜಿಲ್ಲೆಯ 452 ಮಂದಿಯಿಂದ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಕುರಿತಂತೆ ಸ್ಪಷ್ಟನೆಯನ್ನು ಕೇಳಲಾಗಿದೆ. ಅವರಿಂದ ದೃಢೀಕರಣ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದರು.
ಈ ಬಾರಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಆಗಿರುವ 235 ಕೋಟಿ ರೂ.ಗಳ ನಷ್ಟದ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ ಎಂದವರು ವಿವರಿಸಿದರು.
ಈವರೆಗೆ ಸರಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಬಂದಿಲ್ಲ. ಜಿಲ್ಲೆಯ ತಮ್ಮ ಬಳಿ ಇರುವ ಪ್ರಾಕೃತಿಕ ವಿಕೋಪ ನಿಧಿಯಿಂದ ಈವರೆಗೆ 3.5 ಕೋಟಿ ರೂ.ಗಳನ್ನು 85 ಶಾಲೆ ಮತ್ತು ಅಂಗನವಾಡಿ ದುರಸ್ತಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ತೀರಾ ಹಾಳಾಗಿರುವ ರಸ್ತೆಯ ರಿಪೇರಿಗೆ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಮಳೆ ಬಿಟ್ಟ ಬಳಿಕ ದುರಸ್ಥಿ ಕಾರ್ಯ ನಡೆಸಲಿದೆ ಎಂದರು.
ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿರುವ ಅಂಡರ್‌ಪಾಸ್ ಕಾಮಗಾರಿಯನ್ನು ಪೂರ್ಣಗೊಳಿಸಲು 2025ರ ಮಾರ್ಚ್ ತಿಂಗಳವರೆಗೆ ಕಾಲಾವಕಾಶ ಕೇಳಿದ್ದಾರೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.