ಹಸಿರು ಪಟಾಕಿ: ಮಾರ್ಗಸೂಚಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ದೀಪಾವಳಿ ಸಂದರ್ಭದಲ್ಲಿ ‘ಹಸಿರು ಪಟಾಕಿ’ಗಳನ್ನು ಮಾತ್ರ ಹಚ್ಚಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಹಸಿರು ಪಟಾಕಿ ಮಾರಾಟ ಮಾಡಬಹುದು. ನ. 7ರಿಂದ 11ರವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಂಬಂಧಪಟ್ಟ ಇಲಾಖೆ ನಿಗದಿಪಡಿಸಿದ ಸ್ಥಳದಲ್ಲಿ ಮತ್ತು ದಿನಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ಮಳಿಗೆಗಳನ್ನು ತೆರೆದು ಹಸಿರು ಪಟಾಕಿ ಮಾರಾಟ ಮಾಡಬೇಕು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರ ಮೈದಾನಗಳಲ್ಲಿ ಅಥವಾ ಬಯಲು ಪ್ರದೇಶಗಳಲ್ಲಿ ಮಳಿಗೆ ತೆರೆಯಲು ಅನುಮತಿ ಪಡೆಯಬೇಕು. ಎರಡು ಪಟಾಕಿ ಮಾರಾಟ ಮಳಿಗೆಗಳ ಮಧ್ಯೆ 6 ಮೀಟರ್ ಅಂತರ ಇರಬೇಕು ಮತ್ತು ಗಾಳಿಯಾಡುವಂತೆ ಇರಬೇಕು. ಪರವಾನಗಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಮಳಿಗೆಯಲ್ಲಿ ಪ್ರದರ್ಶಿಸಬೇಕು ಎಂದೂ ಮಾರ್ಗ ಸೂಚಿಯಲ್ಲಿದೆ ತಿಳಿಸಲಾಗಿದೆ.
ಪಟಾಕಿ ಖರೀದಿಗೆ ಬರುವ ಗ್ರಾಹಕರಿಗೆ ಕನಿಷ್ಠ 6 ಅಡಿ ಅಂತರ ಗುರುತಿಸಬೇಕು. ಪಟಾಕಿ ಮಾರುವವರು ಮತ್ತು ಖರೀದಿಸಲು ಬರುವವರು ಮಾಸ್ಕ್ ಧರಿಸಿರಬೇಕು. ಖರೀದಿ ವೇಳೆ ಜನದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದೂ ತಿಳಿಸಲಾಗಿದೆ.
ಕೋವಿಡ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ– ರಾಜ್ಯ ಸರ್ಕಾರಗಳು
ಹೊರಡಿಸಿರುವ ನಿರ್ದೇಶನ ಕಡ್ಡಾಯ ಪಾಲಿಸಬೇಕು. ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಮಾರ್ಗಸೂಚಿಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ.