ಉಡುಪಿ: “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಚಿತ್ರದ ಹಾಡು ಬಿಡುಗಡೆ
ಉಡುಪಿ: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಮಂಗಳವಾರ ಸಂಜೆ ಇಲ್ಲಿನ ಕಲ್ಪನಾ ಥಿಯೇಟರ್ ನಲ್ಲಿ ಜರುಗಿತು.
ತುಳುನಾಡ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಸಾಯಿರಾಧಾ ಡೆವಲಪರ್ಸ್ ಮಾಲಕ ಮನೋಹರ್ ಶೆಟ್ಟಿ ಅವರು ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತಾಡಿದ ಅವರು, “ತುಳು ಭಾಷೆಯಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾ ಇಡೀ ದೇಶದಲ್ಲಿ ಹೆಸರು ಮಾಡಲಿ” ಎಂದರು.
ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾತಾಡಿ, “ತುಳು ಭಾಷೆ ಮೇಲಿನ ಪ್ರೀತಿ, ಅಭಿಮಾನದಿಂದ ಯುವಕರ ತಂಡ ಸಿನಿಮಾ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲ ನೀಡಬೇಕಿದೆ. ಉಡುಪಿಯ ಜನರು ತುಳು ಭಾಷೆಯ ಮೇಲೆ ಅತೀವ ಪ್ರೀತಿ ಹೊಂದಿದ್ದು ಸಿನಿಮಾ ನೋಡಿ ಪ್ರೋತ್ಸಾಹಿಸುವುದು ನಿಶ್ಚಿತ” ಎಂದರು.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತಾಡಿ, “ತುಳು ಸಿನಿಮಾರಂಗ ಹತ್ತಾರು ಉತ್ತಮ ಕಲಾವಿದರನ್ನು ಸಮಾಜಕ್ಕೆ ನೀಡಿದೆ. ಸಾಧನೆ ಮಾಡಲು ಛಲ ಇರಬೇಕು. ಛಲ ಇದ್ದಲ್ಲಿ ಮಾತ್ರ ಯಾವುದೇ ಕೆಲಸ ಪರಿಪೂರ್ಣವಾಗಲು ಸಾಧ್ಯ. ತುಳು ಭಾಷೆಯ ಉಳಿವಿಗಾಗಿ ಕೊಡುಗೆ ನೀಡುವ ಇಂತಹ ಸಿನಿಮಾ ತಂಡಕ್ಕೆ ಶುಭಾಶಯಗಳು“ ಎಂದರು.
ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತಾಡಿ, ”ನಾನು ಚಿಕ್ಕಂದಿನಿಂದಲೂ ತುಳು ಸಿನಿಮಾಗಳನ್ನು ನೋಡಿ ಬೆಳೆದವನು. ಬಾಲ್ಯದಲ್ಲಿ ಅಮ್ಮ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅನೇಕ ಸಿನಿಮಾಗಳನ್ನು ನೋಡುತ್ತೇನೆ. ಇಂದು ಬಿಡುಗಡೆಯಾದ ಸಿನಿಮಾ ಹಾಡು ತುಂಬಾ ಚೆನ್ನಾಗಿದೆ. ಜನರ ಆಶೀರ್ವಾದವಿಲ್ಲದೆ ತುಳು ಭಾಷೆ, ಸಿನಿಮಾ ಬೆಳೆಯಲು ಸಾಧ್ಯವಿಲ್ಲ. ನಾವೆಲ್ಲರೂ ತುಳು ಸಿನಿಮಾ ನೋಡಿ ಕಲಾವಿದರನ್ನು ಬೆಂಬಲಿಸಬೇಕು“ ಎಂದರು.
ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತಾಡಿ, ”ಕಲ್ಪನಾ ಸಿನಿಮಾ ಮಂದಿರದಲ್ಲಿ ಇವತ್ತು ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಪ್ರತೀ ರಾಜ್ಯದ ಜನರು ಆಯಾ ಭಾಷಾ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುತ್ತಾರೆ. ಅದೇ ರೀತಿ ತುಳುವರು ನಮ್ಮ ಭಾಷೆಯ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು“ ಎಂದರು.
ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, “ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾವನ್ನು ಕೇವಲ ಮಿಡ್ಲ್ ಕ್ಲಾಸ್ ಪ್ರೇಕ್ಷಕರು ನೋಡಿದರೆ ಸಾಲದು. ಬಡ, ಮಧ್ಯಮ, ಶ್ರೀಮಂತ ಹೀಗೇ ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾ ನೋಡಿ ಗೆಲ್ಲಿಸಬೇಕು” ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಮಾಜಮುಖಿ ಸೇವೆಯಲ್ಲಿ ಸಾಧನೆ ಮಾಡಿರುವ ರವಿ ಕಟಪಾಡಿ, ಹುಲಿ ವೇಷ ಧರಿಸುವ ಸುಷ್ಮಾ ರಾಜ್, ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ಯೂಟ್ಯೂಬರ್ ಶಟರ್ ಬಾಕ್ಸ್ ಫಿಲ್ಮ್ಸ್ ನ ಸಚಿನ್ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ರಮೇಶ್ ಕಾಂಚನ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಹರಿಪ್ರಸಾದ್ ರೈ, ದಿನೇಶ್ ಕಿಣಿ, ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್, ಗಿರೀಶ್ ರಾವ್, ನಿರ್ಮಾಪಕ ಆನಂದ್ ಕುಂಪಲ, ಸಹನಿರ್ಮಾಪಕರಾದ ಗಣೇಶ್ ಕೊಲ್ಯ, ಭರತ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಪವನ್ ಕುಮಾರ್ ಹಾಗೂ ಅಶೋಕ್ ಹೆಗ್ಡೆ, ಲಯನ್ ಕಿಶೋರ್ ಡಿ ಶೆಟ್ಟಿ, ಚಿತ್ತರಂಜನ್ ಬೋಳೂರು, ತಮ್ಮ ಲಕ್ಷ್ಮಣ್, ವಿಜಯ್ ಕೊಡವೂರು, ನಿತಿನ್ ಶೆಟ್ಟಿ, ನಟಿ ಸಮತಾ ಅಮೀನ್, ನಟ ವಿನೀತ್ ಕುಮಾರ್, ಭೊಜರಾಜ ವಾಮಂಜೂರು, ನಿರ್ದೇಶಕ ರಾಹುಲ್ ಅಮೀನ್, ಶ್ಯಾಮಿಲಿ, ಸಂದೀಪ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೋಮೇಶ್ವರ್, ರೋಷನ್, ದಯಾನಂದ ಬಂಟ್ವಾಳ, ರೂಪ ವರ್ಕಾಡಿ, ನವೀನ್ ಶೆಟ್ಟಿ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಉಡುಪಿ ವಲಯಾಧ್ಯಕ್ಷ ಸುಧೀರ್ ಎಂ.ಶೆಟ್ಟಿ, ಮಂಗಳೂರು ವಲಯಾಧ್ಯಕ್ಷ ಹರೀಶ್ ಅಡ್ಯಾರ್, ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಮತ್ತು ಶ್ರೀಧರ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತುಳು ಸಿನಿಮಾದ ಹಾಡೊಂದು ಸಿಂಗಲ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ.
‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತರರು ಅಭಿನಯಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಶೆಟ್ಟಿ ನೃತ್ಯ ಸಂಯೋಜಿಸಿದ್ದಾರೆ. ಮಧುರಾಜ್ ಕಾರ್ಯಕ್ರಮ ನಿರ್ವಹಿಸಿದರು.