ಸುಶಿಕ್ಷಿತ ಸಮಾಜ ನಿರ್ಮಾಣದ ಜತೆಗೆ ರಾಷ್ಟ್ರ ಭಕ್ತರನ್ನು ಸೃಷ್ಟಿಸುವ ಶಿಕ್ಷಣ ಅವಶ್ಯಕ- ಸಂಸದ ಕೋಟ

ಉಡುಪಿ: ಸುಶಿಕ್ಷಿತ ಸಮಾಜ ನಿರ್ಮಾಣದ ಜತೆಗೆ ರಾಷ್ಟ್ರ ಭಕ್ತರನ್ನು ಸೃಷ್ಟಿಸುವ ಶಿಕ್ಷಣದ ಅವಶ್ಯಕತೆ ಇದೆ. ನಮ್ಮ ಸಂವಿಧಾನ, ಹಿರಿಯರು, ಶಿಕ್ಷಣ ಇಲಾಖೆಯ ಮೂಲ ಆಶಯವನ್ನು ಅರ್ಥೈಸಿಕೊಂಡು ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕಾಗಿದೆ. ತನ್ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡು ರಾಷ್ಟ್ರ ಭಕ್ತಿಯನ್ನು ಮೈಗೂಡಿಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಆದರ್ಶ ಚಾರಿಟೆಬಲ್ ಟ್ರಸ್ಟ್, ಆದರ್ಶ ಕಾಲೇಜ್ ಆಫ್ ನರ್ಸಿಂಗ್, ಆದರ್ಶ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಆದರ್ಶ ಪ್ಯಾರಮೆಡಿಕಲ್ ಕಾಲೇಜು, ಆದರ್ಶ ಆಸ್ಪತ್ರೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ| ಸರ್ವೇಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ಜಯಂತಿ ಹಾಗೂ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಲೆವೂರು ಕೆಮ್ತೂರ್ ರಸ್ತೆಯಲ್ಲಿರುವ ಆದರ್ಶ
ಸಮೂಹ ವಿದ್ಯಾಸಂಸ್ಥೆಗಳ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಆದರ್ಶ ಶಿಕ್ಷಕ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆಸುರೇಶ್ ಶೆಟ್ಟಿ ಶುಭಹಾರೈಸಿದರು. ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಅಲೆವೂರು ಗ್ರಾ.ಪಂ. ಅಧ್ಯಕ್ಷ ಯತೀಶ್ ಕುಮಾರ್, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಶ್ರೀರಮಣ ಐತಾಳ್, ನಿರ್ದೇಶಕ ಡಿಡಿಪಿಐ
ಗಣಪತಿ ಕೆ., ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್, ಶ್ರೀಆದರ್ಶ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಸುದೀನಾ, ಆದರ್ಶ ಇನ್ ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಆದರ್ಶ ಪ್ಯಾರಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರೊ| ರವಿಕುಮಾರ್ ಟಿ.ಎನ್.ಉಪಸ್ಥಿತರಿದ್ದರು.

ಡಾ| ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜಿಲ್ಲೆಯ ಸಾಧಕ 30 ಶಿಕ್ಷಕರಿಗೆ ‘ಆದರ್ಶ ಶಿಕ್ಷಕ ಪ್ರಶಸ್ತಿ’ ಪ್ರದಾನ ಮಾಡಿ ಸಮ್ಮಾನಿಸಲಾಯಿತು. ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ತ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಆದರ್ಶ ಇನ್‌ ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ವಿದ್ಯಾರ್ಥಿನಿ ನಿಧಿ ಪ್ರಭು ಅವರನ್ನು ಗೌರವಿಸಲಾಯಿತು. ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ಅನುಶ್ರೀ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!