ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಮೊಂತಿ ಫೆಸ್ಟ್ ಆಚರಣೆ

ಉಡುಪಿ: ಜಿಲ್ಲಾದ್ಯಂತ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅನ್ನು ಕ್ರೆಸ್ತರು ಭಾನುವಾರ ಸಂಭ್ರಮದಿಂದ ಆಚರಿಸಿದರು.

ಧರ್ಮಗುರುಗಳು ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿದರು. ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಭತ್ತದ ತೆನೆಯನ್ನು ಆಶೀರ್ವದಿಸಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.

ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಚಾರ್ಲ್ಸ್ ಮಿನೇಜಸ್ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿದರು. ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂದನೀಯ ಡೆನಿಸ್ ಡೆಸಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂದನೀಯ ಲೆಸ್ಲಿ ಡಿಸೋಜ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂದನೀಯ ಆಲ್ಬನ್ ಡಿಸೋಜ, ಸಾಸ್ತಾನ ಸಂತ ಅಂತೋನಿ ದೇವಾಲಯದಲ್ಲಿ ವಂದನೀಯ ಸುನೀಲ್ ಡಿಸಿಲ್ವ ನೇತೃತ್ವದಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆದವು. ಇದಲ್ಲದೆ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಸಹ ಹಬ್ಬದ ಬಲಿಪೂಜೆಯನ್ನು ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ಹಬ್ಬದ ಆಚರಣೆಗಳು ನಡೆದವು.

ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜನವನ್ನು ತಯಾರಿಸಿ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವಿಸಿದರು.

ಹಬ್ಬಕ್ಕೆ ಮುಂಚಿತವಾಗಿ 9 ದಿನ ಮಾತೆ ಮೇರಿಯ ಕೃಪೆಯನ್ನು ಬೇಡಿಕೊಂಡು ವಿಶೇಷ ಪ್ರಾರ್ಥನೆ (ನವೇನಾ) ಎಲ್ಲ ಚರ್ಚ್ಗಳಲ್ಲಿ ನಡೆಯುತ್ತದೆ. 9 ನೇ ದಿನವನ್ನು ಮೊಂತಿ ಹಬ್ಬವಾಗಿ ಕರಾವಳಿಯ ಕ್ರೈಸ್ತ ಬಂಧುಗಳು ಆಚರಣೆ ಮಾಡಿದ್ದು ಹಬ್ಬದ ದಿನದಂದು ಕನ್ಯಾ ಮರಿಯಮ್ಮ ಅವರ ಮೂರ್ತಿಯನ್ನು ಚರ್ಚ್ನ ಮುಂಭಾಗದಲ್ಲಿಟ್ಟು ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮರಿಗೆ ಪುಷ್ಪಾರ್ಪಣೆ ಮಾಡಿದ ನಂತರ ಚರ್ಚ್ಗಳಲ್ಲಿಮೊಂತಿ ಹಬ್ಬಕ್ಕಾಗಿ ವಿಶೇಷವಾದ ಪ್ರಾರ್ಥನೆ, ಬಲಿಪೂಜೆಗಳು ನಡೆಯಿತು.

ತೆನೆ ಹಬ್ಬದ ಪ್ರಯುಕ್ತ ಇಂದು ಕ್ರೈಸ್ತರಿಗೆ ಸಸ್ಯಾಹಾರಿ ಭೋಜನ. ಈ ದಿನದ ವಿಶೇಷವೇ ಸಸ್ಯಹಾರ ಭೋಜನ. ಕ್ರೈಸ್ತರ ಪ್ರತಿ ಮನೆಯಲ್ಲಿ ಇಂದು ಕನಿಷ್ಟ 3 ಅಥವಾ 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ಇಂದು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಇದರ ಇನ್ನೊಂದು ವೈಶಿಷ್ಟ್ಯವಿದೆ.

Leave a Reply

Your email address will not be published. Required fields are marked *

error: Content is protected !!