ದುಬೈ ಫಾರ್ಚ್ಯೂನ್ ಹೊಟೇಲ್‌ಗೆ 2.5ಕೋಟಿ ವಂಚನೆ ಪ್ರಕರಣ: ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ನೇಮಕ
ಉಡುಪಿ, ಸೆ.8: ಅನಿವಾಸಿ ಭಾರತೀಯ, ಕುಂದಾಪುರ ಮೂಲದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಕಾನೂನು ಅಧಿಕಾರಿ(ಹಿರಿಯ) ಶಿವಪ್ರಸಾದ್ ಆಳ್ವ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅದೇ ಹೊಟೇಲಿನಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬ್ರಹ್ಮಾವರದ ನಾಗೇಶ್ ಪೂಜಾರಿ ಎಂಬಾತ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದೂರು ದಾಖಲಾಗಿದೆ. 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಉಡುಪಿ (ಸಂಚಾರಿ ನ್ಯಾಯಾಲಯ ಬ್ರಹ್ಮಾವರ) ಇಲ್ಲಿನ ಬ್ರಹ್ಮಾವರ ಪೊಲೀಸ್ ಠಾಣೆ ಕ್ರೈಂ.ನಂ: 95/2023ರ ಪ್ರಕರಣದಲ್ಲಿ ಸರಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಹಿರಿಯ ನ್ಯಾಯವಾದಿ ಶಿವಪ್ರಸಾದ್ ಆಳ್ವ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದಿನ ಆದೇಶದವರೆಗೆ ನಿಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.