ಕುಂದಾಪುರ: ರಾ. ಹೆದ್ದಾರಿಯಲ್ಲಿ ತೈಲ ಸೋರಿಕೆ- ಆಯಿಲ್ ಟ್ಯಾಂಕರ್ ವಶಕ್ಕೆ- ಹಲವು ಮಂದಿ ಆಸ್ಪತ್ರೆಗೆ ದಾಖಲು

ಕುಂದಾಪುರ: ಮಂಗಳೂರಿನಿಂದ ಉತ್ತರಪ್ರದೇಶದತ್ತ ಸೋಪ್ ಆಯಿಲ್ ತುಂಬಿದ್ದ ಬ್ರಹತ್ ಟ್ಯಾಂಕರ್ ಅಡಿಭಾಗದಲ್ಲಿ ಉಂಟಾದ ರಂಧ್ರದಿಂದ ಹೊರಚೆಲ್ಲಿದ ಸೋಪ್ ಆಯಿಲ್ ರಸ್ತೆಯಲ್ಲಿನ ಮಳೆ ನೀರಿನೊಂದಿಗೆ ಬೆರೆತು ಉಡುಪಿ ಜಿಲ್ಲೆಯ ತೆಕ್ಕಟ್ಟೆಯಿಂದ ಹೆಮ್ಮಾಡಿಯವರೆಗೂ ಹಲವರು ಬಿದ್ದು ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದ್ದು ಕುಂದಾಪುರ ಟ್ರಾಫಿಕ್ ಪೊಲೀಸರು ಮರವಂತೆ ಬಳಿ ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ.

ಚಾಲಕ ಧ್ಯಾನಚಂದ್ ಎನ್ನುವಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಹಲವರು ಆಸ್ಪತ್ರೆಗೆ ದಾಖಲು

ಮಂಗಳೂರಿನಿಂದ ಯುಪಿಗೆ ಬೆಳಿಗ್ಗೆ 32 ಟನ್ ಸೋಪ್ ಆಯಿಲ್ (ಪಾಮ್ ಪ್ಯಾಟಿ ಆಸಿಡ್ ಡಿಸ್ಟಿಲೇಟ್) ತುಂಬಿದ್ದ 16 ಟೈರ್‌ನ ಬೃಹತ್ ಗಾತ್ರದ ಟ್ಯಾಂಕರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಟ್ಯಾಂಕರ್ ಅಡಿಭಾಗದಲ್ಲಿ ಆಯಿಲ್ ಸೋರಿಕೆಯಾಗುತ್ತಿದ್ದು ಅದೇ ವೇಳೆ ಮಳೆಯಿದ್ದ‌ ಕಾರಣ ವಾಹನದ ಕನ್ನಡಿಯಲ್ಲಿ ಚಾಲಕನಿಗೆ ಇದು ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ ಟ್ಯಾಂಕರ್ ಸಾಗಿದ ದಾರಿಯಲ್ಲಿ ಮತ್ತೆ ಪ್ರಯಾಣಿಸಿದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುವಂತಾಗಿದ್ದು ದ್ವಿಚಕ್ರ ವಾಹನಗಳ ಬ್ರೇಕ್ ತಗುಲದೆ ಸಣ್ಣಪುಟ್ಟ ಅವಘಡ ಸಂಭವಿಸಿತ್ತು. ಪ್ರಾಥಮಿಕ ವರದಿ ಪ್ರಕಾರ 25-30 ಮಂದಿ ಬಿದ್ದಿದ್ದು 6 ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿದ್ದ ಅಪಘಾತದಿಂದ ಹಲವು ವಾಹನಗಳಿಗೆ ಹಾನಿಯಾಗಿದೆ. ಗಂಗೊಳ್ಳಿ ಸಮೀಪ ತೆರಳುವಾಗ ಮಳೆ ನಿಂತಿದ್ದರಿಂದ ಚಾಲಕನಿಗೆ ಹಿಂದೆ ಆಯಿಲ್ ಸೋರಿಕೆ ಕಂಡುಬಂದಿದ್ದು ತ್ರಾಸಿ ಮರವಂತೆ ಬಳಿ ಟ್ಯಾಂಕರ್ ಬದಿಗಿಟ್ಟು ಸಂಬಂದಪಟ್ಟವರಿಗೆ ಮಾಹಿತಿ ನೀಡಿದ್ದಾನೆ. ಟ್ರಾಫಿಕ್ ಠಾಣೆ ಪಿಎಸ್ಐ ಪ್ರಸಾದ್ ಕುಮಾರ್ ಕೆ., ಸುದರ್ಶನ್ ಹಾಗೂ ಸಿಬ್ಬಂದಿಗಳು ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ‌.

ಪೊಲೀಸರ ಸಕಾಲಿಕ ಕ್ರಮಕ್ಕೆ ಶ್ಲಾಘನೆ:

ಘಟನೆ ಬಗ್ಗೆ ಮಾಹಿತಿ ತಿಳಿದು ತಕ್ಷಣ ಕಾರ್ಯಪ್ರವೃತ್ತರಾ ಪೊಲೀಸರು ತೆಕ್ಕಟ್ಟೆಯಿಂದ ಹೆಮ್ಮಾಡಿಯವರೆಗೆ ಹಲವು ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದರು. ಪೊಲೀಸರಿಗೆ ಹಲವೆಡೆ ಸಾರ್ವಜನಿಕರು ಸಹಕಾರ ನೀಡಿದರು. ಶನಿವಾರ ಮಧ್ಯಾಹ್ನ 12 ಗಂಟೆಯವರೆಗೆ 15 ಕಿಮೀ ವ್ಯಾಪ್ತಿಯಲ್ಲಿ ಒನ್ ವೇ ಮಾಡಲಾಗಿದ್ದು ಸಂಭಾವ್ಯ ಅಪಘಾತ ತಪ್ಪಿಸಲು ಮುಂಜಾಗೃತಾ ಕ್ರಮ ವಹಿಸಲಾಗಿತ್ತು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಸಂಚಾರಕ್ಕೆ ಮುಕ್ತ

ದ್ವಿಚಕ್ರ ವಾಹನ ಸವಾರರು ಹಾಗೂ ಲಘು ವಾಹನಕ್ಕೆ ಸಮಸ್ಯೆಯಾಗುತ್ತಿದ್ದಂತೆ ಅಗ್ನಿಶಾಮಕ ದಳದವರು, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪೆನಿಗಳು ಸ್ಥಳಕ್ಕೆ ದೌಡಾಯಿಸಿ ನೀರನ್ನು ಹರಿಸಿ ಸೋರಿಕೆಯಾದ ಸೋಪ್ ಆಯಿಲ್‌ನಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ಮಾಡಲು ಪ್ರಯತ್ನಪಟ್ಟರು.

Leave a Reply

Your email address will not be published. Required fields are marked *

error: Content is protected !!