ಉಡುಪಿ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಂದ ಗಾಲಿಕುರ್ಚಿ ರ‍್ಯಾಲಿ
ಉಡುಪಿ: ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ಸೇವಾಭಾರತಿ ಸೇವಾಧಾಮ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶೇಷಚೇತನರ ಸಬಲೀಕರಣ ಇಲಾಖೆಗಳ ಸಹಯೋಗದೊಂದಿಗೆ ಗಾಲಿಕುರ್ಚಿ ರ‍್ಯಾಲಿಯನ್ನು ಇಂದು ಹಮ್ಮಿಕೊಳ್ಳಲಾಯಿತು.
ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರ‍್ಯಾಲಿಗೆ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ರ‍್ಯಾಲಿಯು ಚಿತ್ತರಂಜನ್ ಸರ್ಕಲ್ ಮುಖಾಂತರ ಸಾಗಿ, ಸರ್ವಿಸ್ ಬಸ್ ಸ್ಟ್ಯಾಂಡ್, ಮೆಸ್ಕಾಂ ರಸ್ತೆ ಮೂಲಕ ಬಂದು ಆಸ್ಪತ್ರೆಯಲ್ಲಿ ಸಮಾಪನಗೊಂಡಿತು.
ಈ ರ‍್ಯಾಲಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಪಾಲ್ಗೊಂಡಿದ್ದರು. ಹಾಸಿಗೆ ಹಿಡಿದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯ ವಾಹಿನಿಗೆ ಬರುವಂತೆ ಮಾಡಿ, ಈ ಮೂಲಕ ಅವರಿಗೆ ಎಲ್ಲರಂತೆ ಬದುಕಲು ಧೈರ್ಯ ತುಂಬುವುದರ ಜೊತೆಗೆ ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಗಾಲಿಕುರ್ಚಿ ರ‍್ಯಾಲಿಯನ್ನು ಆಯೋಜಿಸಲಾಯಿತು.
ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ವಿಜಯ ಕೊಡವೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.