ಉಡುಪಿ ಡಿವೈಎಸ್ಪಿ ವಿರುದ್ಧ ಪ್ರತಿಭಟನೆ: ಖಾಕಿ ತೋಳಗಳ ಕಾಟಕ್ಕೆ ದಲಿತರು ಹೆದರಲಾರರು- ಜಯನ್ ಮಲ್ಪೆ
ಉಡುಪಿ: ಹಲವು ಸಾಧನೆಗಳ ಕಿರೀಟಗಳನ್ನು ತೊಟ್ಟ ಉಡುಪಿ ಜಿಲ್ಲೆಯ ದಲಿತರು ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಖಾಕಿ ತೋಳಗಳ ಕಾಟಕ್ಕೆ ಎಂದೂ ಹೆದರಲಾರೆವು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಉಡುಪಿ ಅಜ್ಜರಕಾಡು ಹುತ್ತಾತ್ಮ ಸ್ಮಾರಕ ಬಳಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣವನ್ನು ದುರ್ಬಲಪಡಿಸುತ್ತಿದ್ದಾರೆಂದು ಆರೋಪಿಸಿ, ಡಿವೈಎಸ್ಪಿ ಪ್ರಭುರವರನ್ನು ಅಮಾನತುಗೊಳಿಸುವಂತೆ ಅಂಬೇಡ್ಕರ್ ಯುವಸೇನೆ ಜಿಲ್ಲಾ ಘಟಕ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತಾ, ದೌರ್ಜನ್ಯಕ್ಕೆ ಒಳಗಾದವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ, ಪ್ರಕರಣಕ್ಕೆ ಸಿ.ಸಿ.ಟೀವಿ ದ್ರಶ್ಯವಳಿ ಮತ್ತು ಇತರರು ಸಾಕ್ಷಿ ನುಡಿದಿದ್ದರೂ, ನ್ಯಾಯಲಯವೇ ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದರೂ, ಪ್ರಕರಣಕ್ಕೆ ಸರಿಯಾದ ಸಾಕ್ಷಾದರವಿಲ್ಲ ಎಂದು ‘ಬಿ’ ರಿಪೋಟ್ ಹಾಕಿರುವುದರ ಹಿಂದೆ ಉಡುಪಿ ಡಿವೈಎಸ್ಪಿ ಪ್ರಭುರವರು ಆರೋಪಿಗಳಿಂದ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.
ಒಬ್ಬ ಅನುಸೂಚಿತ ಜಾತಿಗಳ ದೌರ್ಜನ್ಯ ಕಾಯ್ದೆಯ ತಣಿಖಾಧಿಕಾರಿಯಾಗಿ ಸ್ವತ: ಪೋಲೀಸ್ ಉಪಅಧಿಕ್ಷಕರೇ ಪ್ರಕರಣಕ್ಕೆ ಪೂರಕವಾದ ಸಾಕ್ಷಿಗಳನ್ನು ಬಲಪಡಿಸಬೇಕಾದವರೇ ತಮ್ಮ ಕರ್ತವ್ಯ ಲೋಪವೆಸಗಿ ಆರೋಪಿಗಳಿಗೆ ನೆರವಾಗಿರುವುದು ನಾಚಿಕೆಗೇಡು ಎಂದರು. ಬಾಯಲ್ಲಿ ಅಂಬೇಡ್ಕರ್, ಸ0ವಿಧಾನ,ಬುದ್ಧನ ಬಗ್ಗೆ ಮಾತನಾಡುತ್ತಾ ಹಿಂದಿನಿ0ದ ದಲಿತರ ಬೆನ್ನಿಗೆ ಚೂರಿ ಹಾಕುವ ಇಂತಹ ಅಧಿಕಾರಿಗಳ ವಿರುದ್ಧ ತಕ್ಷಣ ಸರಕಾರ ಸೇವೆಯಿಂದ ವಜಾಗೊಳಿಸಬೇಕು ಎಂದರು. ಬಹುತೇಕ ಉಡುಪಿ ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳಿಂದ ಮತ್ತು ಸರಕಾರಿ ನೌಕರರಿಂದಲೇ ದಲಿತರಿಗೆ ಅನ್ಯಾಯವಾಗುತ್ತಿದೆ. ಮೇಲ್ಜಾತಿಯ ಅಧಿಕಾರಿಗಳು ತಾಳ್ಮೆಯಿಂದ ಸ್ಪಂದಿಸಿ ಕೆಲಸ ಮಾಡಿಕೊಟ್ಟರೂ, ದಲಿತ ಅಧಿಕಾರಿಗಳು ಮತ್ತು ನೌಕರರೇ ಮೀಸಲಾತಿಯ ಲಾಭ ಪಡೆದು ಬಡದಲಿತರಿಗೆ ದೌರ್ಜನ್ಯ, ದಬ್ಬಾಳಿಕೆಯಿಂದ ವರ್ತಿಸುತ್ತಿದ್ದಾರೆಂದು ಜಯನ್ ಮಲ್ಪೆ ಆರೋಪಿಸಿದರು.
ರಂಗಕರ್ಮಿ ಉದ್ಯಾವಾರ ನಾಗೇಶ್ ಮಾತನಾಡಿ ದಲಿತರ ಪರ ನ್ಯಾಯ ವಿದ್ದರೂ ಬೀದಿಯಲ್ಲಿ ನಿಂತು ಪ್ರಜಾಪ್ರಭುತ್ವ ರಕ್ಷಕರಿಗೆ ದಿಕ್ಕಾರ ಕೂಗುವ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆರೋಪಿಗಳ ಪರ ಪೊಲೀಸ್ ಉಪಧೀಕ್ಷರು ಶಾಮಿಲಾಗಿರವುದು ಖಂಡನಾರ್ಹ ಎಂದರು. ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಮಾತನಾಡಿ ಉಡುಪಿಯ ದಲಿತ ವಿರೋಧಿ ಡಿವೈಎಸ್ಪಿಯನ್ನು ತಕ್ಷಣ ಅಮಾನತುಗೊಳಿಸದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು. ದಲಿತ ಹೋರಾಟಗಾರ್ತಿ ಸುಂದರಿ ಪುತ್ತೂರು ಮಾತನಾಡಿ ನಾವೆಲ್ಲ ಹಿಂದು ನಾವೆಲ್ಲ ಬಂಧು ಎನ್ನುವವರು ಒಬ್ಬದಲಿತ ಹೆಣ್ಣು ಮಗಳಿಗೆ ಅನ್ಯಾಯವಾದಾಗ ಧ್ವನಿ ಎತ್ತಲಾಗದಷ್ಟು ನೀಚ ವರ್ತನೆತೊರುತ್ತಾರೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರಸ್ ಮುಖಂಡ ಪ್ರಖ್ಯಾತ್, ಕೃಷ್ಣ ಬಂಗೇರ, ಅನ0ತ ನಾಯ್ಕ ಮಾತನಾಡಿದರು. ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆಯ ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ರವಿರಾಜ್, ಭಗವಾನ್, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಸತೀಶ್ ಮಂಚಿ, ಸುರೇಶ್ ಚಿಟ್ಪಾಡಿ, ಸಂಧ್ಯಾ ತಿಲಕ್‌ರಾಜ್, ಸರಸ್ವತಿ ಕಿನ್ನಿಮುಲ್ಕಿ, ಅರುಣ್ ಸಲ್ಯಾನ್, ವಿನಯ ಕೊಡಂಕೂರು, ಮೀನಾಕ್ಷಿ ಮಾಧವ ಬನ್ನಂಜೆ, ದೀಪಕ್ ಕೋಟ್ಯಾನ್, ಅಹಮಾದ್ ಉಡುಪಿ, ಪ್ರತ್ವಿರಾಜ್ ಶೆಟ್ಟಿ, ಸತೀಶ್ ನಾಯ್ಕ, ಶರತ್ ಶೆಟ್ಟಿ, ಕುಸುಮ ಗುಜ್ಜರಬೆಟ್ಟು, ಸರ್ಜನ್ ಶೆಟ್ಟಿ, ಪದ್ಮನಾಭ ಕಲ್ಮಾಡಿ, ವೆಂಕಟೇಶ್,ಮ0ಜುನಾಥ್ ಮುಂತಾದವರು ಭಾಗವಹಿಸಿದ್ದರು.