ಉತ್ತಮ ಶಿಕ್ಷಕ ಪ್ರಶಸ್ತಿ ಹಿಂಪಡೆದು ಶಿಕ್ಷಕ ಬಂಧುಗಳಿಗೆ ಅಪಮಾನ ಮಾಡಿದ ರಾಜ್ಯ ಸರಕಾರ :ಯಶ್ಪಾಲ್ ಸುವರ್ಣ
ಉಡುಪಿ: ಎರಡು ವರ್ಷಗಳ ಹಿಂದೆ ಮತೀಯ ಶಕ್ತಿಗಳ ಕುಮ್ಮಕ್ಕಿನಿಂದ ಹಿಜಾಬ್ ವಿವಾದ ಸೃಷ್ಟಿಸಿ ಕಾಲೇಜಿನ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ ವಿದ್ಯಾರ್ಥಿಗಳ ನಡೆಯನ್ನು ಖಂಡಿಸಿದ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಜಿ. ರಾಮಕೃಷ್ಣ ರವರಿಗೆ ಶಿಕ್ಷಣ ಇಲಾಖೆಯ ವತಿಯಿಂದ ಆಯ್ಕೆಯಾಗಿದ್ದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರಕಾರ ಮತೀಯ ಶಕ್ತಿಗಳ ಓಲೈಕೆಗಾಗಿ ಹಿಂಪಡೆಯುವ ಮೂಲಕ ರಾಜ್ಯದ ಸಮಸ್ತ ಶಿಕ್ಷಕ ವೃಂದಕ್ಕೆ ಅಪಮಾನ ಮಾಡಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಶಿಕ್ಷಕರ ಆಯ್ಕೆ ಸಮಿತಿ ಶಿಕ್ಷಕರ ಸಾಧನೆ, ಅರ್ಹತೆಯನ್ನು ಪರಾಮರ್ಶಿಸಿ ಶ್ರೇಷ್ಠ ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡುವ ಪ್ರಶಸ್ತಿಯ ಘನತೆಗೆ ರಾಜ್ಯ ಸರ್ಕಾರ ಧಕ್ಕೆ ತಂದಿದೆ. ಶಿಕ್ಷಣ ಇಲಾಖೆಯಲ್ಲಿ ಇಸ್ಲಾಮೀಕರಣ ಮಾಡಲು ಹೊರಟ ರಾಜ್ಯ ಸರಕಾರದ ನಡೆ ಖಂಡನೀಯ.
ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಈ ಜಿಲ್ಲೆಯ ಓರ್ವ ದಕ್ಷ ಪ್ರಾಮಾಣಿಕ ಶಿಕ್ಷಕರಿಗೆ ಮಾಡಿರುವ ಅಪಮಾನ ಇಡೀ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ಮಾಡಿದ ಅವಮಾನ.
ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಶಾಲೆಯ ಶಿಕ್ಷಣ ವ್ಯವಸ್ಥೆಯನ್ನು ಕಾಪಾಡಲು ಮುಂದಾದ ಪ್ರಾಂಶುಪಾಲರನ್ನು ಗುರಿಯಾಗಿಸಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹಿಜಾಬ್ ವಿವಾದದ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆ ತಂದ ಮತೀಯ ಶಕ್ತಿಗಳಿಗೆ ರಾಜ್ಯ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿರುವುದು ದುರದೃಷ್ಟಕರ.
ರಾಜ್ಯ ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಪ್ರಶಸ್ತಿಗೆ ಅತ್ಯಂತ ಅರ್ಹರಾದ ಬಿ.ಜಿ. ರಾಮಕೃಷ್ಣ ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸ ಬೇಕು. ತಪ್ಪಿದಲ್ಲಿ ಜಿಲ್ಲೆಯ ಶಿಕ್ಷಕರಿಗೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.