ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅ. ಸೊಸೈಟಿಯ ಹೂಡೆ-ಕೆಮ್ಮಣ್ಣು ಶಾಖೆ ಉದ್ಘಾಟನೆ
ಉಡುಪಿ: ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ನೂತನ 5ನೇ ಹೂಡೆ-ಕೆಮ್ಮಣ್ಣು ಶಾಖೆಯು ಹೂಡೆ-ಕೆಮ್ಮಣ್ಣು ಮುಖ್ಯ ರಸ್ತೆಯಲ್ಲಿರುವ ಕ್ಯಾಸ್ತಲಿನೋ ಬೇಕರಿ ಕಟ್ಟಡದಲ್ಲಿ ಆ. 31ರಂದು ಉದ್ಘಾಟನೆಗೊಂಡಿತು.
ಕೆಮ್ಮಣ್ಣು ಸಂತ ತೆರೇಜಾ ಚರ್ಚಿನ ಧರ್ಮಗುರುಗಳಾದ ವಂ ಫಾ.ಫಿಲಿಪ್ ನೇರಿ ಅರಾನ್ಹಾರವರು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿಯವರೊಂದಿಗೆ ಜಂಟಿಯಾಗಿ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ. ಸುವರ್ಣರವರು ಗಣಕಯಂತ್ರವನ್ನು ಉದ್ಘಾಟಿಸಿದರು. ಕೆಮ್ಮಣ್ಣು ಪಂಚಾಯತ್ ಅಧ್ಯಕ್ಷೆ ಕುಸುಮ ಹಾಗೂ ಸಮಾಜ ಸೇವಕರಾದ ವೆರೋನಿಕಾ ಕರ್ನೇಲಿಯೋ ಜಂಟಿಯಾಗಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವು ಕೆಮ್ಮಣ್ಣು ಸಂತ ತೆರೇಜಾ ಚರ್ಚಿನ ಲಿಟ್ಲ್ ಪ್ಲವರ್ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಲೂವಿಸ್ ಲೋಬೋ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂದೀಪ್ ಎ. ಫೆರ್ನಾಂಡೀಸ್ ಸಂಸ್ಥೆಯ ಕುರಿತು ಪ್ರಾಸ್ತಾವಿಕ ಮಾತನಾಡುತ್ತಾ ಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮವನ್ನು ಉಡುಪಿ ಶಾಸಕರಾದ ಯಶ್ಪಾಲ್ ಎ. ಸುವರ್ಣ ಮತ್ತು ಬೀಚ್ ಹೀಲಿಂಗ್ ಹೋಂ ಹೂಡೆ ಇದರ ನಿರ್ದೇಶಕ ಡಾ|| ಮೋಹಮ್ಮದ್ ರಫಿಕ್ ಜಂಟಿಯಾಗಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸಂಸ್ಥೆಗೆ ಶುಭಕೋರಿ, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಗಾಗಿ ಪ್ರತಿಷ್ಟಿತ “ಸಹಕಾರ ರತ್ನ” ಪ್ರಶಸ್ತಿಯಿಂದ ಪುರಸ್ಕöÈತ ಉಡುಪಿಯ ಶಾಸಕರಾದ ಯಶ್ಪಾಲ್ ಎ. ಸುವರ್ಣ ಮತ್ತು ಜಿಲ್ಲಾಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ಸಹಕಾರ ಸಂಘಗಳ ಪಾಮುಖ್ಯತೆ ಬಗ್ಗೆ ಅದೇ ರೀತಿ ಸದ್ರಿ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಾ, ತಮ್ಮ ಸಹಕಾರ ಯವತ್ತೂ ಸಂಘದ ಜೊತೆ ಇರುತ್ತದೆ ಎಂದು ತಿಳಿಸಿದರು. ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್‌ರವರು ಸಂಸ್ಥೆಯ ಏಳಿಗೆಯ ಬಗ್ಗೆ ಹಾಗೂ ವ್ಯವಹಾರದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತಾ ತಮ್ಮ ಶುಭಾಶಯಗಳನ್ನು ತಿಳಿಸಿದರು. ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಥಾಮಸ್ ಡಿ’ ಸೋಜ ಸಂಸ್ಥೆಗೆ ಒಳಿತನ್ನು ಆಶಿಸುತ್ತಾ ತಮ್ಮ ಶುಭ ನುಡಿಗಳನ್ನು ಆಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯಾ ಗ್ರಾಹಕರಿಗೆ ಠೇವಣಿ ಪತ್ರಗಳನ್ನು ವಿತರಿಸಿ ಸಂಸ್ಥೆಗೆ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಜೇಮ್ಸ್ ಡಿ’ ಸೋಜ ವಂದಿಸಿದರು. ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕಟ್ಟಡ ಮಾಲಿಕರಾದ ರೋಮಿಯೋ ಕ್ಯಾಸ್ತಲಿನೋ, ಸಂಘದ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.