ಕೆಎಎಸ್ ಅಧಿಕಾರಿಯ ಉಡುಪಿ, ಬೆಂಗಳೂರು ಮನೆ ಮೇಲೆ ಬೆಳ್ಳಂ ಬೆಳಗ್ಗೆ ಎಸಿಬಿ ದಾಳಿ
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಕುರಿತಂತೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮನೆ, ಕಚೇರಿ ಸೇರಿದಂತೆ 6 ಕಡೆ ದಾಳಿ ನಡೆಸಲಾಗಿದೆ . ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಕುರಿತು ದೂರು ದಾಖಲಾಗಿತ್ತು ಎಂದು ಹೇಳಲಾಗಿದೆ. ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಮನೆಯ ಮೇಲೂ ದಾಳಿ ನಡೆಸಲಾಗಿದೆ ಎಂದೂ ವರದಿಯಾಗಿದೆ.
ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಸೇರಿದಂತೆ ಉಡುಪಿಯಲ್ಲಿರುವ ಡಾ. ಸುಧಾ ಅವರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.