ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶದ ಬಗ್ಗೆ ನಾವು ಎಚ್ಚರವಹಿಸಬೇಕು- ಕೇಶವ ಪೂಜಾರಿ
ಉದ್ಯಾವರ: ಇಂದು ಅಭಿವೃದ್ಧಿಯ ಹೆಸರಲ್ಲಿ ನಾವು ನಮ್ಮ ಸುತ್ತಲಿನ ಮರಗಿಡಗಳನ್ನು ಕಡಿದು ಹಾಕುತ್ತೇವೆ. ಇದೆ ಚಾಳಿ ಮುಂದುವರಿದರೆ ಮುಂದೊಂದು ದಿನ ನಮಗೆ ಆಮ್ಲಜನಕದ ಕೊರತೆಯಾಗುವಂತ ಸಂದರ್ಭ ಬಂದು ಬದುಕು ದುಸ್ತರವಾಗುತ್ತದೆ.ಹಾಗಾಗಿ ಅಭಿವೃದ್ಧಿ ಮಾಡುವಾಗ ವೈಜ್ಞಾನಿಕವಾಗಿ ಆಲೋಚನೆ ಮಾಡಿ ಪ್ರಕೃತಿಗೆ ಹಾನಿಯಾಗದಂತೆ ಅಭಿವೃದ್ಧಿ ಕೆಲಸವನ್ನು ಮಾಡಬೇಕಾಗಿದೆ.
ಉಡುಪಿ ಗಸ್ತು ಅರಣ್ಯಪಾಲಕರಾದ ಕೇಶವ ಪೂಜಾರಿಯವರು ಸೇವಾ ಮತ್ತು ಸಾಂಸ್ಕೃತಿಯ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಆಶಯದಲ್ಲಿ ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಾಗವಾನಿ ಗಿಡ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತಾಡಿದರು.
ನಾಶ ಮಾಡಿದ ಮರಗಳಿಗೆ ಬದಲಾಗಿ ಎಲ್ಲಿ ಖಾಲಿ ಸ್ಥಳ ಇದ್ದೇಯೋ ಅಲ್ಲಿ ಗಿಡಗಳನ್ನ ನೆಟ್ಟು ಅವುಗಳನ್ನು ಪೋಷಿಸಬೇಕಾದ ಅನಿವಾರ್ಯತೆ ನಮಗಿದೆ. ನಕಲಿ ಅಭಿವೃದ್ಧಿ ಮಾಡುವ ಪ್ರಕೃತಿ ನಾಶದ ಬಗ್ಗೆ ನಾವು ಜಾಗರೂಕರಾಗಿರಬೇಕು. ಒಂದು ಗಿಡವನ್ನು ನೆಟ್ಟು ಅದನ್ನ ನಾವು ಮೂರು ವರ್ಷಗಳ ಕಾಲ ಜಾಗ್ರತೆಯಿಂದ ಆರೈಕೆ ಮಾಡಿದರೆ ಆ ಗಿಡ ಮರವಾಗಿ ನೂರು ವರ್ಷಗಳ ಕಾಲ ನಮ್ಮನ್ನ ಬೆಳೆಸುತ್ತದೆ. ಇಂದು ನಾವು ಉಸಿರಾಡುವ ಆಮ್ಲಜನಕ ಮರಮಟ್ಟುಗಳಿಂದ ನಮಗೆ ಲಭ್ಯವಾಗುತ್ತದೆ. ಒಬ್ಬ ಮನುಷ್ಯನಿಗೆ ಸರಾಸರಿ ಆರರಿಂದ ಏಳು ಮರಗಳಿಂದ ಹೊರ ಸೂಸುವ ಆಮ್ಲಜನಕದ ಅವಶ್ಯಕತೆ ಇದೆ. ನಾವು ಅದನ್ನ ಆಲೋಚನೆ ಮಾಡದೆ ಅಭಿವೃದ್ಧಿಯ ಹೆಸರಲ್ಲಿ ಮರಮಟ್ಟುಗಳನ್ನ ಕಡಿದು ಹಾಕುತ್ತೇವೆ. ಈ ಬಗ್ಗೆ ಎಚ್ಚರವನ್ನು ನಾವು ವಹಿಸದಿದ್ದರೆ ಮುಂದೊಂದು ದಿನ ಮನುಕುಲ ದುರಂತದತ್ತ ಸಾಗುವ ಅಪಾಯವಿದೆ ಎಂದು
ಅವರು ಮುಂದುವರೆಯುತ್ತಾ ನಮ್ಮ ದೇಶದಲ್ಲಿ ಶೇ. 22 ಕ್ಕಿಂತ ಕಡಿಮೆ ಅರಣ್ಯ ಪ್ರದೇಶವಿದೆ .ಆದರೆ ನಿಜವಾಗಿ ನಮ್ಮ ರಾಜ್ಯದ ವಿಸ್ತೀರ್ಣಕ್ಕನುಗುಣವಾಗಿ ಶೇ.33 ಅರಣ್ಯ ಪ್ರದೇಶ ಇರಬೇಕಿತ್ತು. ಸ್ವಾತಂತ್ರ್ಯ ದೊರಕುವ ಸಂದರ್ಭದಲ್ಲಿ ಐವತ್ತು ಶೇಕಡ ಇದ್ದ ಅರಣ್ಯ ಪ್ರದೇಶ ಈಗ 22 ಶೇ. ಇಳಿದಿದೆ. ಅಂದರೆ ಇದು ಅಪಾಯವನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಬದುಕು ಸುಗಮವಾಗಲು ಈ ಪ್ರಕೃತಿಯನ್ನು ಸಮತೋಲನ ಇರಿಸಲು ನಾವು ಕಟಿಬದ್ಧರಾಗೋಣ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಮಾತಾಡುತ್ತಾ, ಆಧುನಿಕತೆಯ ಈ ಕಾಲದಲ್ಲಿ ನಾವು ಪರಿಸರಕ್ಕೆ ಹಾನಿ ಮಾಡುವ ಮೂಲಕ ನಮ್ಮ ಬದುಕನ್ನೇ ಆತಂಕಕ್ಕೆ ಓಡ್ಡುತ್ತಿದ್ದೇವೆ .ಹೀಗೆ ಮುಂದುವರೆದರೆ ಮುಂದೊಂದು ದಿವಸ ಮನುಕುಲ ನಾಶವಾಗುವ ಅಪಾಯವಿದೆ. ಇದನ್ನು ಸರಿತೋಗಿಸ ಬೇಕಾದ ಏಕೈಕ ಮಾರ್ಗ ಎಂದರೆ ನಾವು ಗಿಡಗಳನ್ನು ಬೆಳೆಸುವುದು ,ಮರಗಳನ್ನ ರಕ್ಷಿಸುವುದು. ಈ ಕೆಲಸ ನಮ್ಮ ಸಂಸ್ಥೆ ಹಲವಾರು ವರ್ಷಗಳಿಂದ ಒಂದು ವ್ರತದಂತೆ. ಒಂದು ನೇಮದಂತೆ ಮಾಡಿಕೊಂಡು ಬಂದಿರುತ್ತದೆ. ಇಲ್ಲಿ ಗಿಡಗಳನ್ನು ಕೇವಲವಿತರಿಸುವುದು ಮಾತ್ರವಲ್ಲ, ವಿತರಿಸಿದ ಗಿಡಗಳನ್ನು ಒಂದು ವರ್ಷದ ಅವಧಿಯಲ್ಲಿ ಚೆನ್ನಾಗಿ ಬೆಳೆಸಿದ ವಿದ್ಯಾರ್ಥಿಗೆ ನಗದು ಪುರಸ್ಕಾರವನ್ನು ಕೂಡ ಸಂಸ್ಥೆ ನೀಡುತ್ತದೆ. ಹಾಗಾಗಿ ಇಲ್ಲಿ ಪಡೆದುಕೊಂಡ ಗಿಡವನ್ನು ಯೋಗ್ಯ ಸ್ಥಳದಲ್ಲಿ ನೆಟ್ಟು ಬೆಳೆಸಿ, ಗಿಡವನ್ನು ಪ್ರೀತಿಸಿ ಅದು ನಮ್ಮನ್ನು ಪ್ರೀತಿಸುತ್ತದೆ. ಎಂದರು.
ವೇದಿಕೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಮುಕಾಂಬೆ , ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಗುರುಪ್ರಸಾದ್, ಸಂಸ್ಥೆಯ ನಿರ್ದೇಶಕರಾದ ಶರತ್ ಕುಮಾರ್ ಅವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ತಿಲಕ್ ರಾಜ್ ಸಾಲ್ಯಾನ್ ಸ್ವಾಗತಿಸಿದರು,ಪ್ರ. ಕಾರ್ಯದರ್ಶಿ ಅಬಿದ್ ಆಲಿ ಧನ್ಯವಾದ ಇತ್ತರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದ್ದರು. ಈ ಕಾರ್ಯಕ್ರಮದ ನಂತರ ಸುಮಾರು 300 ವಿದ್ಯಾರ್ಥಿಗಳಿಗೆ ಸಾಗುವಾನಿ ಗಿಡವನ್ನು ವಿತರಿಸಲಾಯಿತು.