ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಸೆ.3- ನವದುರ್ಗಾ ಲೇಖನ ಯಜ್ಞ-ಸಂಕಲ್ಪ ಸ್ವೀಕಾರ, ಧಾರ್ಮಿಕ ಸಭೆ
ಕಾಪು: ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ಹಂತದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ಮಾರಿಯಮ್ಮನ ಸನ್ನಿಧಿಯಲ್ಲಿ 2025ರ ಮಾರ್ಚ್‌ನಲ್ಲಿ ನಡೆಯುವ ಜೀರ್ಣೋದ್ಧಾರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಫೆಬ್ರವರಿಯಲ್ಲಿ ನವದುರ್ಗಾ ಲೇಖನ ಯಜ್ಞ ನಡೆಯಲಿದೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಪೂರ್ವ ಭಾವಿಯಾಗಿ ಸೆ.3ರಂದು ಬೆಳಗ್ಗೆ ಶ್ರೀಕ್ಷೇತ್ರದಲ್ಲಿ ಮಂಗಳ ಗೌರಿ ಪೂಜೆಯೊಂದಿಗೆ ಸಮಿತಿ ಉದ್ಘಾಟನೆ ಮತ್ತು ಲೇಖನ ಸಂಕಲ್ಪ ಸ್ವೀಕಾರ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಜಗತ್ತಿನೆಲ್ಲೆಡೆ ನೆಲೆಸಿರುವ ಮಾರಿಯಮ್ಮ ದೇವಿಯ ಭಕ್ತರನ್ನು ಸೇರಿಸಿಕೊಂಡು ನವದುರ್ಗಾ ಲೇಖನ ಯಜ್ಞ ಹಾಗೂ ನವಚಂಡಿಯಾಗ ನಡೆಸಲಾಗುತ್ತಿದ್ದು, ನವ ದುರ್ಗಾ ಲೇಖನ ಯಜ್ಞದಲ್ಲಿ ಭಾಗವಹಿಸಲು ಬಯಸುವ ಭಕ್ತರು ಸಂಕಲ್ಪ ಸ್ವೀಕರಿಸಲು ಈ ಕಾರ್ಯಕ್ರಮದಂದು ಅವಕಾಶ ಒದಗಿಸಿಕೊಡಲಾಗುತ್ತಿದೆ ಎಂದರು.
ಕಾಪು ಮಾರಿಯಮ್ಮನ ಕ್ಷೇತ್ರದ ಐತಿಹಾಸಿಕ ದಾಖಲೆಯಾಗಿ ಉಳಿಯಲಿರುವ ಈ ಕಾರ್ಯಕ್ರಮ ವನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮಾಜಿ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಕೊಲ್ಲೂರು ಶ್ರೀ ಮುಖಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಹಾಗೂ ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕಾರ್ಯಾ ಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಡಾ.ವಿದ್ಯಾಶಂಕರ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಮಹೇಶ್ ಠಾಕೂರ್, ಸಂದೀಪ್ ಮಂಜ, ಕೆ.ವಿಶ್ವನಾಥ ಹಾಗೂ ಯೋಗೀಶ್ ವಿ.ಶೆಟ್ಟಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ರಘುಪತಿ ಭಟ್ ಮಾತನಾಡಿ, ನವದುರ್ಗಾ ಲೇಖನ ಯಜ್ಞದಲ್ಲಿ ಭಾಗವಹಿಸುವ ಭಕ್ತರು ನವದುರ್ಗಾ ಲೇಖನ ಯಜ್ಞದ ಪುಸ್ತಕ ಪಡೆಯಲು 199 ರೂ. ನೀಡಿ, ಹೆಸರು ನೋಂದಾಯಿಸಿದರೆ, ಮಂಗಳಗೌರಿ ಪೂಜೆಯಲ್ಲಿ ಪಾಲ್ಗೊಂಡು, ನವದುರ್ಗಾ ಲೇಖನ ಯಜ್ಞದ ಸಂಕಲ್ಪ ಸ್ವೀಕರಿಸಲು ಅವಕಾಶ ಮಾಡಿಕೊಡಲಾಗುವುದು. ಅ.28 ರ ವರೆಗೆ ನೋಂದಣಿಗೆ ಅವಕಾಶವಿದೆ ಎಂದರು.
ಅ.29ರಂದು ಶ್ರೀ ವಾಗೀಶ್ವರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞದ ಪುಸ್ತಕ ಬಿಡುಗಡೆ ಗೊಳಿಸಲಾಗುವುದು. ಅ.29ರ ನಂತರ 45 ದಿನಗಳವರೆಗೆ ರಶೀದಿ ಮಾಡಿ ಲೇಖನ ಯಜ್ಞದ ಪುಸ್ತಕವನ್ನು ಪಡೆಯಲು ಅವಕಾಶವಿದೆ. ಈ ಯಜ್ಞದಲ್ಲಿ ಬಳಸಲಾಗುವ ಭಕ್ತಾದಿಗಳಿಂದ ಬರೆಯಲ್ಪಟ್ಟ ಪುಸ್ತಕಗಳನ್ನು ಶಾಶ್ವತವಾಗಿ ದೇಗುಲದಲ್ಲಿ ಕಾಪಿಟ್ಟು ಆ ಪುಸ್ತಕಗಳಿಗೆ ವರ್ಷಕ್ಕೊಮ್ಮೆ ವಾಗೇಶ್ವರಿ ಪೂಜೆ ನೆರವೇರಿಸಲು ಉದ್ದೇಶಿಸಲಾಗಿದೆ. ಯೋಜಿತ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಪ್ರಧಾನ ಸಮಿತಿಯ ನೇತೃತ್ವದಲ್ಲಿ ಅವಿಭಜಿತ ದ.ಕ ಜಿಲ್ಲೆಗಳ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲೂ ಪ್ರತ್ಯೇಕ ಸಮಿತಿ ನಡೆಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಮುಂಬಯಿ-ಸಮಿತಿಯ ಪದಾಧಿಕಾರಿಗಳಾದ ಎರ್ಮಾಳ್ ಹರೀಶ್ ಶೆಟ್ಟಿ ಚಂದ್ರಹಾಸ್ ಶೆಟ್ಟಿ ಎಮಾಳ್ ಉಪಸ್ಥಿತರಿದ್ದರು.
ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಉಪಸ್ಥಿತಿಯಲ್ಲಿ ಸೆ.3 ರಂದು ಬೆಳಗ್ಗೆ 8.30ಕ್ಕೆ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆಯೊಂದಿಗೆ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಚಾಲನೆ ನೀಡಲಾಗುವುದು. 9 ಗಂಟೆಗೆ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ವಿತರಣೆ ನಡೆಯಲಿದೆ. ಬೆಳಗ್ಗೆ 10.15ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಅವಧೂತ ವಿನಯ್ ಗುರೂಜಿ ಉದ್ಘಾಟಿಸಲಿದ್ದಾರೆ. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.