ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ
ಉಡುಪಿ: (ಉಡುಪಿ ಟೈಮ್ಸ್ ವರದಿ)ಯಕ್ಷಗಾನದ ತೆಂಕು ಮತ್ತು ಬಡಗುತಿಟ್ಟಿನಲ್ಲಿ ಖ್ಯಾತರಾಗಿದ್ದ ಮಲ್ಪೆ ವಾಸುದೇವ ಸಾಮಗ(71) ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಕುಂದಾಪುರ ತಾಲೂಕು ಕೋಟೇಶ್ವರದ ಸ್ವಗೃಹದಲ್ಲಿ ಅಲ್ಪ ಕಾಲಿಕ ಅಸೌಖ್ಯಕ್ಕೆ ಒಳಗಾಗಿದ್ದ ಇವರಿಗೆ, ಕೋವಿಡ್ ಸೋಂಕು ತಗುಲಿತ್ತೆಂದು ತಿಳಿದುಬಂದಿದೆ.
ಯಕ್ಷಗಾನ ಕ್ಷೇತ್ರದಲ್ಲಿ ವಾಕ್ಪಟುತ್ವದಿಂದ ಜನಮನ್ನಣೆಗೆ ಪಾತ್ರರಾಗಿದ್ದವರು, ತಾಳಮದ್ದಳೆ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಕಲಾವಿದರಾಗಿದ್ದರು. ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್ ಮೇಳ ಬಳಿಕ ಕಾಳಿಂಗ ನಾವಡರ ಪ್ರಸಿದ್ಧಿಯ ಕಾಲದಲ್ಲಿ ಸಾಲಿಗ್ರಾಮ ಮೇಳ ಸೇರಿದ ಅವರ ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ, ಚೈತ್ರಪಲ್ಲವಿಯ ಪಾತ್ರಗಳು ಪ್ರಸಿದ್ಧಿ ಪಡೆದಿತ್ತು, ನಾಗಶ್ರೀ ಪ್ರಸಂಗ ಶುಬ್ರಾಂಗನ ಪಾತ್ರಕ್ಕೆ ಶಿರಿಯಾರ ಮಂಜು ನಾಯ್ಕರ ನಂತರ ಹೊಸ ರೂಪವನ್ನು ನೀಡಿದ ಇವರು, ಯಕ್ಷಗಾನದಲ್ಲಿ ಪ್ರಥಮ ಬಾರಿಗೆ ನ್ಯಾಯಾಲಯದ ಸನ್ನಿವೇಷ ರಚಿಸಿದ್ದು, ಪ್ರೇಕ್ಷಕರ ಮನಗೆದ್ದಿತ್ತು.
ಪೆರ್ಡೂರು ಮೇಳದಲ್ಲು ಹೊಸ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಇವರ ಜೋಡಿವೇಷಗಳು ಮಾತಿನ ಚಕಮಕಿಯಿಂದ ಹೊಸ ಹೊಸ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆದಿತ್ತು. ಬಳಿಕ ಬಗ್ವಾಡಿ, ಸೌಕೂರು ಮುಂತಾದ ಬಯಲಾಟಗಳ ಮೇಳದಲ್ಲಿ ಭಾಗವಹಿಸಿ ಮೇಳದಲ್ಲಿ ಮಿಂಚಿದ್ದರು.