ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು- ಡಾ. ನಿರಂಜನ್

ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭಾವಪ್ರಕಾಶ ಸಭಾಂಗಣದಲ್ಲಿ ಶನಿವಾರ “ವಿಶಿಖಾನುಪ್ರವೇಶ” ಪದವಿ ಪ್ರದಾನ ಸಮಾರಂಭವು ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ಅತಿಥಿಗಳನ್ನು ಸ್ವಾಗತಿಸಿ, ಅಧ್ಯಯನದಲ್ಲಿ ಶ್ರದ್ಧೆ, ಪರಿಶ್ರಮ ಹಾಗೂ ನೂತನ ಕಲಿಕಾ ವಿಧಾನಗಳ ಅನುಸರಣೆಯೊಂದಿಗೆ ಯಶಸ್ವಿಯಾಗಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಉಜಿರೆ ಇದರ ಕಾರ್ಯದರ್ಶಿಯವರಾದ ಡಾ. ಸತೀಶ್ಚಂದ್ರ ಎಸ್.ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೂತನವಾಗಿ ಪದವಿಯನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಆಯುರ್ವೇದ ಜ್ಞಾನ, ಕೌಶಲ್ಯ ಮತ್ತು ಮಾನವೀಯ ಮೌಲ್ಯಗಳೊಂದಿಗೆ ತಮ್ಮ ವೃತ್ತಿಯಲ್ಲಿ ತೊಡಗುವಂತೆ ಸಂದೇಶ ನೀಡಿದರು.

ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪಕುಲಪತಿಯಾದ ಡಾ. ನಿರಂಜನ್ ಕುಮಾರ್‌ರವರು ತಮ್ಮ ಅತಿಥಿ ಭಾಷಣದಲ್ಲಿ ವೈದ್ಯರನ್ನು ಪ್ರೋತ್ಸಾಹಿಸಿ, ಕಠಿಣ ಪರಿಶ್ರಮ, ಧೈರ್ಯ, ಕಾಳಜಿ ಮತ್ತು ಸಮರ್ಪಣೆಯಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪ್ರೀತಿ ಮತ್ತು ಪ್ರಯತ್ನವು ಶ್ರೇಷ್ಟತೆಗೆ ಕಾರಣವಾಗುತ್ತದೆ. ಲಭ್ಯತೆ, ಸಾಮರ್ಥ್ಯ, ಸ್ನೇಹಶೀಲತೆ ಮತ್ತು ಕೈಗೆಟುಕುವಿಕೆಯು ವೃತ್ತಿ ಜೀವನದ ಯಶಸ್ಸಿಗೆ ಪ್ರಮುಖ ಅಂಶ ಎಂದು ತಿಳಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸ್ನಾತಕ ವಿದ್ಯಾರ್ಥಿಯಾದ ಡಾ. ವಿನಾಯಕ ಜೋಯಿಸ್‌ರವರಿಗೆ ಅತ್ಯುತ್ತಮ ವಿದ್ಯಾರ್ಥಿಯೆಂದು ಚಿನ್ನದ ಪದಕವನ್ನು ನೀಡಲಾಯಿತು. ಕಾಲೇಜಿನ ಆಡಳಿತ ಮುಖ್ಯಾಧಿಕಾರಿಯಾದ ಡಾ. ವೀರಕುಮಾರ ಕೆಯವರು 76 ಸ್ನಾತಕ ಮತ್ತು 48 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಅಶೋಕ್ ಕುಮಾರ್ ಬಿ.ಎನ್. ಹಾಗೂ ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ. ಗಿರಿ ವಿದ್ಯಾರ್ಥಿಗಳಿಗೆ ಪದವಿ ಪತ್ರವನ್ನು ಪಡೆಯಲು ಆಹ್ವಾನಿಸಿದರು.

ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಲತಾ ಕಾಮತ್ ರವರು ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ವಂದಿಸಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಮತ್ತು ಡಾ. ಲಿಖಿತಾ ಡಿ.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!