ಈ ಬಾರಿ ಹಸಿರು ದೀಪಾವಳಿ: ಹಸಿರು ಪಟಾಕಿ ಬಳಸಲು ಸರ್ಕಾರದ ಅನುಮತಿ

ಬೆಂಗಳೂರು(ಉಡುಪಿ ಟೈಮ್ಸ್ ವರದಿ): ದೀಪಾವಳಿ ಹೊಸ್ತಿಲಿನಲ್ಲೇ ರಾಜ್ಯದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಇನ್ನೊಂದು ನಿರ್ಧಾರ ಕೈಗೊಂಡಿದೆ.

ರಾಜ್ಯದ ಹಿಂದೂಗಳ ಭಾವನೆಗಳಿಗೆ ಬೆಲೆಕೊಟ್ಟು ಪಟಾಕಿಗಳ ಸಂಪೂರ್ಣ ನಿಷೇಧವನ್ನು ಹಿಂಪಡೆದು ಹಸಿರು ಪಟಾಕಿಗಳನ್ನು ಬಳಸಲು ಸರ್ಕಾರವು ಅನುಮತಿ ನೀಡಿದೆ. ದೀಪಾವಳಿ ಹಬ್ಬದ ದಿನ ಪಟಾಕಿ ಮಾರುವುದು ಮತ್ತು ಸಿಡಿಸುವುದನ್ನು ನಿಷೇಧಿಸುವ ಬಗ್ಗೆ ಸಾರ್ವಜನಿಕರಿಂದ ಹಲವಾರು ಸಲಹೆಗಳು ಬಂದಿರುತ್ತವೆ. ಕೊವಿಡ್-19 ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರವು ಈಗಾಗಲೇ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿನ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳ ಮತ್ತು ಅರ್ಥಗರ್ಭಿತವಾಗಿ, ಭಕ್ತಿಪೂರ್ವಕವಾಗಿ ಆಚರಿಸುವುದು ಸೂಕ್ತವಾಗಿದೆ.
ದೀಪಾವಳಿ ಹಬ್ಬದ ದಿನ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಸರಳ ಮತ್ತು ಸುಂದರವಾಗಿ ಹಬ್ಬವನ್ನು ಆಚರಿಸಲು ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಪ್ರಜೆಗಳಿಗೂ ಮುಂಚಿತವಾಗಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ಎಂದು ಸರ್ಕಾರವು ಆದೇಶ ಹೊರಡಿಸಿದೆ. ಸರ್ಕಾರವು ಈ ಆದೇಶ ಹೊರಡಿಸುವುದಕ್ಕೂ ಮೊದಲು ರಾಜ್ಯದಲ್ಲಿ ಎಲ್ಲಾ ಮಾದರಿಯ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಇನ್ನೂ ಕಡಿಮೆಯಾಗದ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸರ್ಕಾರವು ಸ್ಪಷ್ಟಪಡಿಸಿತ್ತು. ಆದರೆ ಪಟಾಕಿ ಸಂಪೂರ್ಣ ನಿಷೇಧಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಹಸಿರು ಪಟಾಕಿಗಳನ್ನು ಬಳಸುವುದಕ್ಕೆ ಇದೀಗ ಅನುಮತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!