ಮುಡಾ ಹಗರಣ: ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಅರ್ಜಿ- ಸೆ.2ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್​ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಇದೀಗ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.

ಇಂದು ಬೆಳಗ್ಗೆ ಹೈಕೋರ್ಟ್ ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ಆರಂಭವಾಯಿತು. ಸುಮಾರು ಐದಾರು ಗಂಟೆಗಳ ಸುದೀರ್ಘ ವಾದ-ವಿವಾದ ಆಲಿಸಿದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ಸೆಪ್ಟೆಂಬರ್ 2ಕ್ಕೆ ಮುಂದೂಡಿದ್ದು ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದರು. ಇನ್ನು ಹಿರಿಯ ವಕೀಲ​ ಕೆ.ಜಿ ರಾಘವನ್ ಸಹ ವಾದಮಂಡನೆಗೆ ಅವಕಾಶ ಕೋರಿದ್ದಾರೆ.

ಇಂದು ಸಿಎಂ ವಿರುದ್ಧದ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರಿಂದ ವಿವೇಚನೆ ಬಳಸಿಯೇ ಅನುಮತಿ ನೀಡಲಾಗಿದೆ ಎಂದು ವಕೀಲ ತುಷಾರ ಮೆಹ್ತಾ ವಾದ ಮಂಡಿಸಿದ್ದರು. ಬಳಿಕ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು. ನಂತರ ವಿಚಾರಣೆಯನ್ನು ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಲಾಯಿತು. ನಂತರ ಪ್ರತಿವಾದಿ ಪ್ರದೀಪ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.

ವಾದ-ವಿವಾದದ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು ಬಹಳ ಜನ ವಾದ ಮಂಡನೆ ಮಾಡಿದ್ದೀರಿ. ಆದರೆ ಇದರಲ್ಲಿ ಸಿಎಂ ಪಾತ್ರ ಏನು ಎಂದು ಯಾರು ಹೇಳುತ್ತಿಲ್ಲ. ಸಿಎಂ ಪಾತ್ರದ ಬಗ್ಗೆ ನಿಮ್ಮ ಉತ್ತರವೇನು ಎಂದು ದೂರುದಾರರ ಪರ ವಕೀಲರಿಗೆ ಪ್ರಶ್ನೆ ಮಾಡಿದರು. ಈ ವೇಳೆ ಮಧ್ಯಪ್ರದೇಶದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸಿಎಂ ವಿರುದ್ಧ ಆರೋಪಿಸುವುದಕ್ಕೆ ಏನು ಇಲ್ಲ.. ಹೀಗಾಗಿ ಸಿಎಂ ವಿರುದ್ಧ ಆರೋಪಗಳಿಲ್ಲವೆಂದು ಪ್ರತಿಕ್ರಿಯಿಸಿದರು. ನಂತರ ಮುಖ್ಯಮಂತ್ರಿಗಳ ಪಾತ್ರ, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ ಮಂಡಿಸುತ್ತೇನೆ. ಕೆಲ ಸಂದರ್ಭಗಳಲ್ಲಿ ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡುವ ಅರ್ಹತೆ ಕಳೆದುಕೊಳ್ಳುತ್ತದೆ. ಆರ್.ಎಸ್.ನಾಯಕ್ ಪ್ರಕರಣ ಉಲ್ಲೇಖಿಸಿ ಪ್ರಭುಲಿಂಗ್ ನಾವದಗಿ ವಾದ ಶುರು ಮಾಡಿದರು. ಸಿಎಂ ಸಿದ್ದರಾಮಯ್ಯರನ್ನು ರಕ್ಷಣೆ ಮಾಡುವ ಸಲುವಾಗಿಯೇ ಕ್ಯಾಬಿನೆಟ್‌ ನಿರ್ಣಯವನ್ನು ಮಾಡಲಾಗಿದೆ. ಇಂತಹ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸುವ ಅಗತ್ಯವಿಲ್ಲ ಎಂದು ವಾದಿಸಿದರು.

Leave a Reply

Your email address will not be published. Required fields are marked *

error: Content is protected !!