ಉಡುಪಿ ನಗರಸಭೆ ನೂತನ ಕಟ್ಟಡ ಶೀಘ್ರ ನಿರ್ಮಾಣಕ್ಕೆ ಶಾಸಕ ಮಂಜುನಾಥ್ ಭಂಡಾರಿ ಮನವಿ
ಉಡುಪಿ: ನೂತನ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಉಡುಪಿ ತಾಲೂಕು ಕಚೇರಿ ಹಳೆ ಕಟ್ಟಡದ 96 ಸೆಂಟ್ಸ್ ಜಾಗವನ್ನು ಸರ್ಕಾರ ನೀಡಿದೆ. ಸದ್ರಿ ಜಾಗದಲ್ಲಿ 45 ಕೋಟಿ ರೂ. ಮೊತ್ತದಲ್ಲಿ ಹೊಸ ಕಟ್ಟಡ ನಿರ್ಮಿಸಲು ನೀಲ ನಕಾಶೆ ತಯಾರಿಸಿ, ನಿರ್ಮಾಣಕ್ಕಾಗಿ ಸರ್ಕಾರದಿಂದ ಈಗಾಗಲೇ ಅನುಮೋದನೆ ಪಡೆಯಲಾಗಿರುತ್ತದೆ. ಆದರೆ ಹೊಸ ಕಟ್ಟಡ ನಿರ್ಮಿಸಲು ಪ್ರಸ್ತಾವಿತ ಸ್ಥಳದಲ್ಲಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಸ್ಥಳೀಯವಾಗಿ ಸಂಘ-ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಕಾರ್ಯಾದೇಶ ತಡೆಹಿಡಿಯಲ್ಪಟ್ಟಿರುತ್ತದೆ.
ನಗರಸಭೆ ಕಟ್ಟಡವನ್ನು ಶೀಘ್ರ ನಿರ್ಮಿಸಬೇಕೆಂಬ ಸಾರ್ವಜನಿಕ ಒತ್ತಡವಿರುವುದರಿಂದ ಹಳೆ ಕಟ್ಟಡ ತೆರವಿಗೆ ಇರುವ ಅಡೆತಡೆಗಳನ್ನು ಸರ್ಕಾರದ ಮಟ್ಟದಲ್ಲಿ ನಿವಾರಿಸಿವುದು ಅಥವಾ ಹೊಸ ಜಾಗವನ್ನು ಗುರುತಿಸಿ, ಸರ್ಕಾರದಿಂದ ಮಂಜೂರು ಮಾಡಿ ನಗರಸಭೆ ಹೊಸ ಕಟ್ಟಡವನ್ನು ನಿರ್ಮಿಸಲು ಅಗತ್ಯ ಕ್ರಮ ಜರುಗಿಸಬೇಕೆಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಮನವಿ ಮಾಡಿದ್ದಾರೆ.
ಹಳೆಯ ಕಟ್ಟಡವನ್ನು ತೆರವುಗೊಳಿಸಲು 2023ರ ಮಾರ್ಚ್ 10ರಂದು ಕರೆದ ಇ-ಟೆಂಡರ್ ನಂತೆ ಮೇ ತಿಂಗಳಲ್ಲಿ ಮಂಗಳೂರಿನ ಮಸೂದ್ ಮಹಮ್ಮದ್ ಕುದ್ರೋಳಿ ಎಂಬವರಿಗೆ ಆದೇಶ ನೀಡಲಾಗಿರುತ್ತದೆ. ಕಟ್ಟಡವು ಸ್ವಾತಂತ್ರ್ಯ ಪೂರ್ವದ ಕಟ್ಟಡವಾಗಿದ್ದು ಇದನ್ನು ತೆರವುಗೊಳಿಸಿ ನೂತನ ಕಟ್ಟಡವನ್ನು ಶೀಘ್ರವೇ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿ ರುತ್ತದೆ. ನಗರಸಭೆಯ ಹಳೇ ಕಟ್ಟಡವು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿರುವ ಕಾರಣ ಉಡುಪಿಯ ಏಕೈಕ ಪಾರಂಪರಿಕ ಕಟ್ಟಡವಾಗಿದೆ. ಇದನ್ನು ಉಳಿಸಬೇಕೆಂದು ಈ ಹಿಂದೆ ನಡೆದಿದ್ದ ಅಭಿಯಾನವನ್ನೇ ನೆಪವಾಗಿಟ್ಟುಕೊಂಡು ಹೊಸ ಕಟ್ಟಡದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಮಾನ್ಯ ಪೌರಾಡಳಿತ ಸಚಿವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಮಂಜುನಾಥ್ ಭಂಡಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.