ಆ.31: ನಿಟ್ಟೆ ಆಫ್ ಕ್ಯಾಂಪಸ್‌ನಲ್ಲಿ ಮೊತ್ತಮೊದಲ ಘಟಿಕೋತ್ಸವ
ಉಡುಪಿ, ಆ.28: ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ 14ನೇ ಹಾಗೂ ನಿಟ್ಟೆ ಆಫ್ ಕ್ಯಾಂಪಸ್‌ನ ಮೊತ್ತ ಮೊದಲ ಘಟಿಕೋತ್ಸವವು ಆ.31ರ ಶನಿವಾರ ಬೆಳಗ್ಗೆ 10:30ಕ್ಕೆ ನಿಟ್ಟೆಯಲ್ಲಿರುವ ಎನ್‌ಎಂಎಎಂಐಟಿಯ ಸದಾನಂದ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ನಿಟ್ಟೆ ವಿವಿಯ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರಲ್ಲಿ ನಿಟ್ಟೆ ಆಫ್ ಕ್ಯಾಂಪಸ್, ನಿಟ್ಟೆ ಡೀಮ್ಡ್ ವಿವಿ ಆಡಳಿತದಡಿ ಸೇರ್ಪಡೆಗೊಂಡಿದ್ದು, ಮೊದಲ ಬಾರಿಗೆ ಕ್ಯಾಂಪಸ್‌ನಲ್ಲಿ ರುವ ಮೂರು ಸ್ನಾತಕೋತ್ತರ ಪದವಿ -ಎಂ.ಟೆಕ್, ಎಂಬಿಎ, ಎಂಸಿಎ- ಮುಗಿಸಿರುವ 311 ಮಂದಿ ಅಂದು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ ಎಂದರು.
ನಿಟ್ಟೆ ವಿವಿಯ ಕುಲಾಧಿಪತಿಗಳಾದ ಎನ್.ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಶ್ರೀರಾಮ್ ಫೈನಾನ್ಸ್ ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ಗೋವಿಂದ್ ರೇವಣ್ಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಡಾ. ಮೂಡಿತ್ತಾಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಚಾನ್ಸಲರ್ (ಆಸ್ಪತ್ರೆ ನಿರ್ವಹಣೆ) ಡಾ.ಎಂ. ಶಾಂತಾರಾಮ ಶೆಟ್ಟಿ, ಪ್ರೊ ಚಾನ್ಸಲರ್ (ಆಡಳಿತ) ವಿಶಾಲ್ ಹೆಗ್ಡೆ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಡಾ.ಎಂ.ಎಸ್. ಮೂಡಿತ್ತಾಯ ಅಲ್ಲದೇ, ವಿವಿಯ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ ಮುಗೇರಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಡಾ.ಪ್ರಸಾದ್ ಬಿ.ಶೆಟ್ಟಿ, ಆಫ್ ಕ್ಯಾಂಪಸ್ ಸೆಂಟರ್‌ನ ಮೂರು ಕಾಲೇಜುಗಳ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿರುವರು.
311 ಮಂದಿಗೆ ಪಿಜಿ ಪದವಿ: ಅಂದಿನ ಸಮಾರಂಭದಲ್ಲಿ 29 ಮಂದಿ ಎಂ.ಟೆಕ್, 120 ಮಂದಿ ಎಂಸಿಎ ಹಾಗೂ 162 ಮಂದಿ ಎಂಬಿಎ ಪದವಿಗಳನ್ನು ಸ್ವೀಕರಿಸಲಿದ್ದಾರೆ. ಅಲ್ಲದೇ ಮೂವರು ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 14 ಮಂದಿ ಮೆರಿಟ್ ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದೂ ಅವರು ವಿವರಿಸಿದರು.
1979ರಲ್ಲಿ ಮಾಜಿ ಲೋಕಸಭಾ ಸ್ಪೀಕರ್ ಆಗಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಅವರು ನಿಟ್ಟೆಯಲ್ಲಿ ಪ್ರಾರಂಭಿಸಿದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ 14 ಮಂದಿ ವಿದ್ಯಾರ್ಥಿಗಳ ನಿಟ್ಟೆ ಹೈಸ್ಕೂಲ್‌ನೊಂದಿಗೆ ಪ್ರಾರಂಭಗೊಂಡ ನಿಟ್ಟೆ ಸಮೂಹ ಸಂಸ್ಥೆ ಗಳಲ್ಲಿ ಇಂದು ಮೂರು ಕ್ಯಾಂಪಸ್‌ಗಳಲ್ಲಿ ಒಟ್ಟು 25,000 ವಿದ್ಯಾರ್ಥಿ ಗಳು ಕಲಿಯುತಿದ್ದಾರೆ ಎಂದರು.
2008ರಲ್ಲಿ ನಿಟ್ಟೆ ಡೀಮ್ಡ್ ವಿವಿ ಪ್ರಾರಂಭಗೊಂಡಿದ್ದು, 2022ರಲ್ಲಿ ನಿಟ್ಟೆ ಕ್ಯಾಂಪಸ್‌ನಲ್ಲಿರುವ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಡಾ.ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜುಗಳು ನಿಟ್ಟೆ ವಿವಿಯ ಭಾಗವಾಗಿದೆ. ಈ ಬಾರಿ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸುತ್ತಿರುವ 311 ಮಂದಿ ನಿಟ್ಟೆ ಆಫ್ ಕ್ಯಾಂಪಸ್‌ನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದಾರೆ ಎಂದರು.
ಅತಿ ಶೀಘ್ರದಲ್ಲಿ ನಿಟ್ಟೆ ಸಮೂಹದ ಬೆಂಗಳೂರು ಕ್ಯಾಂಪಸ್ ಸಹ ನಿಟ್ಟೆ ವಿವಿಯ ಅಧಿಕೃತ ಭಾಗವಾಗಲಿದೆ. ಈ ಕುರಿತ ಪ್ರಕ್ರಿಯೆ ನಡೆಯುತಿದ್ದು, ಶೀಘ್ರವೇ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ ಎಂದು ತಿಳಿಸಿದ ಡಾ.ಮೂಡಿತ್ತಾಯ, ನಿಟ್ಟೆ ವಿವಿಯು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯಿಂದ ‘ಎ’ ಗ್ರೇಡ್ ಮತ್ತು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟುನಿಂದ ಭಾರತದ 1100ಕ್ಕೂ ಅಧಿಕ ವಿವಿಗಳ ಪೈಕಿ 66ನೇ ಸ್ಥಾನವನ್ನು ಪಡೆದಿದೆ. ಟೈಮ್ಸ್ ಉನ್ನತ ಶಿಕ್ಷಣ ಇಂಪ್ಯಾಕ್ಟ್ ಶ್ರೇಯಾಂಕಗಳಲ್ಲಿ ಜಾಗತಿಕವಾಗಿ ಅಗ್ರ 300 ವಿವಿಗಳಲ್ಲಿ ಗುರುತಿಸಲ್ಪಟ್ಟಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಗೋಪಾಲ ಮುಗೇರಾಯ, ಡಾ.ಹರ್ಷ ಹಾಲಹಳ್ಳಿ, ಡಾ.ಪ್ರಸಾದ್ ಬಿ.ಶೆಟ್ಟಿ, ನಿಟ್ಟೆ ಇಂಜಿನಿಯ ರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರಂಜನ್ ಚಿಪ್ಳುಣಕರ್, ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಬಾರ ನಿರ್ದೇಶಕ ಡಾ.ಸುಧೀರ್ ಉಪಸ್ಥಿತರಿದ್ದರು.