ಮಹಿಳಾ ಸಹಾಯವಾಣಿ ಸ್ಥಗಿತ ನಿರ್ಧಾರ ಕೈಬಿಡಿ: ಜಿಲ್ಲಾ ಮಹಿಳಾ ಕಾಂಗ್ರೆಸ್
ಉಡುಪಿ: ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರವು ಕಲ್ಪಿಸಿರುವ ಕೆಲವೇ ಕೆಲವು ಯೋಜನೆಗಳಲ್ಲಿ ಮಹಿಳಾ ಸಹಾಯವಾಣಿಯೂ ಒಂದು. ಈ ಯೋಜನೆಯನ್ನು ರಾಜ್ಯ ಸರ್ಕಾರವು ನಿಲ್ಲಿಸಲು ನಿರ್ಧರಿಸಿರುವುದು ದುರದೃಷ್ಟಕರ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆಯವರು ಹೇಳಿದ್ದಾರೆ. ಸ್ತ್ರೀಶಕ್ತಿಯಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದ್ದ ಮಹಿಳಾ ನಾಯಕಿ ಮೋಟಮ್ಮನವರು ಮಹಿಳೆಯರಿಗೆ ಕೌಟುಂಬಿಕ ವಾಗಿ ನ್ಯಾಯ ನೀಡುವ ಸದುದ್ದೇಶದಿಂದ ಕರ್ನಾಟಕ ರಾಜ್ಯದಾದ್ಯಂತ ಮಹಿಳಾ ಸಹಾಯವಾಣಿ” ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಅಂದಿನ ಸರ್ಕಾರದ ಮೂಲಕ ಆರಂಭಿಸಿದರು.ಆದರೆ ಇದೀಗ ರಾಜ್ಯ ಸರ್ಕಾರದ ಹದ್ದಿನ ಕಣ್ಣು ಇದರ ಮೇಲೆ ಬಿದ್ದು ಈ ಯೋಜನೆಯನ್ನು ನಿಲ್ಲಿಸುವ,ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದಾದರೆ ಅದು ದೊಡ್ಡ ತಪ್ಪು. ಹಲವಾರು ನೊಂದ ಮಹಿಳೆಯರು ದೌರ್ಜನ್ಯ ಕ್ಕೊಳಗಾದ ಮಹಿಳೆಯರು ಮಾನಸಿಕ ಒತ್ತಡ, ಖಿನ್ನತೆ ಯಿಂದ ಬಳಲುತ್ತಿರುವ ಮಹಿಳೆಯರು ಮುಂತಾದವರಿಗೆ ಸಾಂತ್ವನ ಸಿಗುತ್ತಿದ್ದ ಜಾಗವೆಂದರೆ ಅದು ಮಹಿಳಾ ಸಹಾಯವಾಣಿ.ಇದನ್ನು ನಾನು ಕಳೆದ ಹದಿನೈದು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ ಮಾತ್ರವಲ್ಲ,ನಾನೇ ಕೆಲವು ನೊಂದ ಮಹಿಳೆಯರನ್ನು ಈ ಕೇಂದ್ರಕ್ಕೆ ಕಳುಹಿಸಿ ಅವರಿಗೆ ಸೂಕ್ತ ಸಾಂತ್ವನ ಸಿಗುವಂತೆ ಮಾಡಿದ್ದೇನೆ.ಅಂತಾಹುದರಲ್ಲಿ ಈ ಕೇಂದ್ರವನ್ನು ಮುಚ್ಚುವ ಸರ್ಕಾರದ ನಿರ್ಧಾರದ ಹಿಂದಿನ ಅಸಲಿ ಕಾರಣವೇನೆಂದು ತಿಳಿಯದಾಗಿದೆ.ಮೇಲುನೋಟಕ್ಕೆ ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದೊಂದು ಹೆಜ್ಜೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದು ನಿಜವೆಂದಾದರೆ ಸರ್ಕಾರಕ್ಕೆ ಕಡಿತಗೊಳಿಸಲು ಮಹಿಳಾ ಕಾರ್ಯಕ್ರಮವೇ ಬೇಕಾಗಿತ್ತೇ? ಸಚಿವರಿಗೆ,ಶಾಸಕರಿಗೆ,ನಿಗಮಗಳು ಅಧ್ಯಕ್ಷರಿಗೆ ಖರ್ಚು ಮಾಡುವಂತಹ ಕೋಟಿಗಟ್ಟಲೆ ಹಣದಲ್ಲಿ ಒಂದಿಷ್ಟು ಕಡಿತ ಮಾಡಲಿ.ಅದು ಬಿಟ್ಟು ಮಹಿಳಾ ಸಹಾಯವಾಣಿ ಯನ್ನು ನಿಲ್ಲಿಸುವುದರಲ್ಲಿ ಯಾವ ಪುರುಷಾರ್ಥ ಅಡಗಿದೆ? ಇವತ್ತು ಕೋರ್ಟು, ಕಚೇರಿ ಗಳಲ್ಲಿ ಮಹಿಳಾ ದೌರ್ಜನ್ಯದ ಕೇಸ್ ಆಗಲಿ, ಡೊಮೆಸ್ಟಿಕ್ ವಯಲೆನ್ಸ್ ಆಗಲೀ,ನ್ಯಾಯ ಸಿಗುವುದಕ್ಕೆ ಬಹಳಷ್ಟು ವರ್ಷಗಳೇ ಬೇಕಾಗುತ್ತವೆ..ಕೆಲವೊಮ್ಮೆ ಪುರುಷರಲ್ಲಿ ಉಂಟಾಗುವ ಮಾನಸಿಕ ಸಮಸ್ಯೆಯಿಂದ ಮಹಿಳೆಯರ ಮೇಲೆ ಸಂಶಯ ಪಡುವುದು, ಅವರನ್ನು ಹೊಡೆಯುವುದು,ಬಡಿಯುವುದು ಇತ್ಯಾದಿಗಳನ್ನು ಮಹಿಳಾ ಸಹಾಯವಾಣಿ ಮೂಲಕ ಗಮನಿಸಿ ಮಾನಸಿಕ ಚಿಕಿತ್ಸೆಗೆ ಒಳಪಡಿಸಿದ್ದನ್ನು ಕೂಡಾ ಗಮನಿಸಿದ್ದೇನೆ.ಹಾಗೆಯೇ ಕೆಲವೊಮ್ಮೆ ಮಹಿಳೆಯರಲ್ಲೂ ಚಿತ್ತವಿಕಲತೆ,ಖಿನ್ನತೆ ಮುಂತಾದ ಕಾಯಿಲೆ ಗಳು ಬಂದಾಗ ಅವುಗಳನ್ನು ಗಮನಿಸಿ,ಅದಕ್ಕೂ ಚಿಕಿತ್ಸೆ ಕೊಡಿಸಿದ್ದೂ ಇದೆ. ನಮ್ಮ ಉಡುಪಿ ಜಿಲ್ಲೆ ಯಲ್ಲಂತೂ ಸಹಾಯವಾಣಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ.ಈ ಸಂಕಷ್ಟದ ಸಮಯದಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು,ಅಧಿಕಾರಿಗಳು ವಾಸ್ತವ ಪರಿಸ್ಥಿತಿಯ ಬಗ್ಗೆ ಏ ನನ್ನೂ ಅರಿಯದೇ ಈ ನಿರ್ಧಾರಕ್ಕೆ ಬಂದಿರುವುದು ದುರಾದೃಷ್ಟಕರ.ಇದನ್ನು ಕೂಡಲೇ ಕೈಬಿಡಬೇಕು.ಮಹಿಳೆಯರಿಗೆ ಬೆಂಗಾವಲಾಗಿರುವ ಸಾಂತ್ವನ ಹಿಂದಿನಂತೆ ಕೆಲಸ ನಿರ್ಹಿಸುವಂತಾಗಬೇಕು. ಎಂದವರು ಹೇಳಿದರು .ಈ ಬಗ್ಗೆ ನಮ್ಮ ಉಡುಪಿ ಜಿಲ್ಲೆಯ ಎಲ್ಲಾ ಐದು ಮಂದಿ ಶಾಸಕರು ಕೂಡಾ ಗಮನ ಹರಿಸಬೇಕು.ಸಂಸದೆಯಾಗಿ ಆರಿಸಿ ಬಂದಲ್ಲಿ ನಾನು ಮಹಿಳೆಯರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು 2014ರಲ್ಲಿಗುಡುಗಿದ್ದ ಸಂಸದರಾದ ಶೋಭಾ ಕರಂದ್ಲಾಜೆ ಯವರೇ ,ನಿಮಗಿದೋ ಒಂದು ಉತ್ತಮ ಅವಕಾಶ.ನೊಂದಿರುವ ಮಹಿಳೆಯರ ಧ್ವನಿಯಾಗಿ,ಸರ್ಕಾರದ ಮೇಲೆ ಒತ್ತಡ ತರುವುದರ ಮೂಲಕ ಮಹಿಳಾ ಸಹಾಯವಾಣಿ ಯನ್ನು ಉಳಿಸಿ.ತನ್ಮೂಲಕ ಕೌಟುಂಬಿಕವಾಗಿ ನೊಂದಿರುವ ಮಹಿಳೆಯರ ಕಣ್ಣೀರನ್ನು ಒರೆಸಲು ಮುಂದಾಗಿ.ಎಂದು ಗೀತಾ ವಾಗ್ಳೆ ಯವರು ಒತ್ತಾಯಿಸಿದ್ದಾರೆ. |