ಉಡುಪಿ: ಕೆರೆಗೆ ಬಿದ್ದು ಕಾಲೇಜ್ ವಿದ್ಯಾರ್ಥಿ ಮೃತ್ಯು ಪ್ರಕರಣ- ಅನುಮಾನ ವ್ಯಕ್ತಪಡಿಸಿದ ಪೋಷಕರು
ಉಡುಪಿ: ಕರಂಬಳ್ಳಿಯ ಕೆರೆಗೆ ಬಿದ್ದು ವಿದ್ಯಾರ್ಥಿ ಲಕ್ಷ್ಮೀಂದ್ರನಗರದ ನಿವಾಸಿ ಸಿದ್ಧಾರ್ಥ್ ಶೆಟ್ಟಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹಲವಾರು ರೀತಿಯ ಅನುಮಾನಗಳು ಹುಟ್ಟುಕೊಂಡಿದ್ದು, ಆತನೊಂದಿಗಿದ್ದ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟತೊಡಗಿವೆ.
ಮಣಿಪಾಲದ ಆಟೋಮೊಬೈಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿಕೊಂಡಿದ್ದ ಸಿದ್ಧಾರ್ಥ್ ಶೆಟ್ಟಿ. ಇಲ್ಲಿ ವ್ಯಾಸಂಗ ಮುಗಿಸಿ ಜರ್ಮನಿಯಲ್ಲಿ ಆಟೋ ಮೊಬೈಲ್‌ನಲ್ಲಿ ಸ್ವಾತಕೋತ್ತರ ಮುಂದುವರಿಸ ಬೇಕೆಂಬ ಕನಸು ಕಂಡಿದ್ದು ಮಾತ್ರವಲ್ಲದೇ ಕಾರುಗಳ ವಿನ್ಯಾಸ ಕ್ಷೇತ್ರದಲ್ಲಿ ವೃತ್ತಿ ಆರಂಭಿಸುವ ಆಸೆಯನ್ನು ಹೊಂದಿದ್ದ. ಇಲ್ಲಿಗೆ ವ್ಯಾಸಂಗಕ್ಕೆ ಬಂದಿರುವ ಮಹಾರಾಷ್ಟ್ರ ಸಹಿತ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಸಿದ್ಧಾರ್ಥ ಕನ್ನಡಿಗನಾಗಿ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಹಲವು ವಿಷಯಗಳಲ್ಲಿ ಸಮನ್ವಯ ಸಾಧಿಸುತ್ತಿದ್ದ. ಹೀಗಾಗಿಯೇ ಕಾಲೇಜಿನಲ್ಲಿ ಸ್ನೇಹ ಜೀವಿಯಾಗಿದ್ದ.
ಸ್ನೇಹಿತರ ಮೇಲೆಯೇ ಸಂಶಯ? ಘಟನೆ ನಡೆದ ದಿನ ಆತನೊಂದಿಗಿದ್ದ ಸ್ನೇಹಿತರಾದ ಶಾಶ್ವತ್ ಶೆಟ್ಟಿ (18), ಹಾರ್ದಿಕ್ ಶೆಟ್ಟಿ (18), ದರ್ಶನ್ ಪೂಜಾರಿ (19) ಅವರ ಮೇಲೆ ಅನುಮಾನ ಮೂಡತೊಡಗಿದೆ. ಈ ಪೈಕಿ ಶಾಶ್ವತ್ ಶೆಟ್ಟಿ ಈಗಾಗಲೇ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಶಾಶ್ವತ್ ಶೆಟ್ಟಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಸಂಬಂಧ ಪ್ರಕರಣ ದಾಖಲಾಗಿದೆ. ಹಾರ್ದಿಕ್ ಶೆಟ್ಟಿ ಹಾಗೂ ದರ್ಶನ್ ಪೂಜಾರಿ ಕೂಡ ಬೇರೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ಈ ಮೂವರು ಸಿದ್ಧಾರ್ಥ್ನ ಆತ್ಮೀಯ ಸ್ನೇಹಿತರಲ್ಲ. ಆದರೂ ಅಂದು ದರ್ಶನ್ ಪೂಜಾರಿ ಜತೆ ಸ್ಕೂಟರ್‌ನಲ್ಲಿ ಸಿದ್ಧಾರ್ಥ್ ಹೋಗಿದ್ದರೂ, ಅವನಿಗೆ ಎಲ್ಲಿಗೆ ಹೋಗುತ್ತಿದ್ದಾನೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಅಲ್ಲದೆ, ಸಿದ್ಧಾರ್ಥ್ಗೆ ಈಜು ಬರುವುದಿಲ್ಲ ಎಂಬುದು ಶಾಶ್ವತ್ ಶೆಟ್ಟಿಗೆ ಸ್ಪಷ್ಟವಾಗಿ ತಿಳಿದಿದ್ದರೂ, ಈಜಲು ಕರೆದುಕೊಂಡು ಹೋಗಿದ್ದಾರೆ. ಸಂಜೆ 6 ಗಂಟೆಯ ಮೇಲೆ ಈ ಘಟನೆ ನಡೆದಿದೆಯಾದರೂ ಅವರ ಸ್ನೇಹಿತರು ರಕ್ಷಿಸುವ ಕೆಲಸವನ್ನೂ ಮಾಡಿಲ್ಲ. ಹೀಗಾಗಿಯೇ ಈ ಪ್ರಕರಣದಲ್ಲಿ ಶಾಶ್ವತ್ ಶೆಟ್ಟಿ ಕೈವಾಡದ ಶಂಕೆಯನ್ನು ಕುಟುಂಬದ ಸದಸ್ಯರು ವ್ಯಕ್ತಪಡಿಸಿದ್ದಾರೆ.