ಉಡುಪಿ ಶ್ರೀಕೃಷ್ಣ ಲೀಲೋತ್ಸವ- ಮೊಸರುಕುಡಿಕೆ ಕಣ್ತುಬಿಕೊಂಡ ಸಾವಿರಾರು ಭಕ್ತರು

ಚಿತ್ರಗಳು: ಉಮೇಶ್ ಮಾರ್ಪಳ್ಳಿ

ಉಡುಪಿ: ಇಂದು ಶ್ರೀಕೃಷ್ಣಮಠದ ರಥಬೀದಿಯಲ್ಲಿ ಮುದ್ದು ಕೃಷ್ಣನ ವೈಭವದ ಶ್ರೀಕೃಷ್ಣ ಲೀಲೋತ್ಸವ – ಮೊಸರುಕುಡಿಕೆ ಆಚರಣೆ ನಡೆಯಿತು. ಸಾವಿರಾರು ಮಂದಿ ಭಕ್ತರು ಲೀಲೋತ್ಸವ-ರಥೋತ್ಸವದಲ್ಲಿ ಭಾಗಿಯಾಗಿ ಕಣ್ತುಬಿಕೊಂಡರು.

ಮಧ್ಯಾಹ್ನ 3 ಗಂಟೆಗೆ ಸಂಪ್ರದಾಯದಂತೆ ಕೃಷ್ಣನ ಮೃಣ್ಮಯ ಮೂರ್ತಿಯನ್ನು ರಥರೋಹಣ ನಡೆಸಲಾಯಿತು. ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರು ಕೃಷ್ಣನಿಗೆ ಮಂಗಳಾರತಿ ಬೆಳಗಿದರು. ಈ ಸಂದರ್ಭದಲ್ಲಿ ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು, ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥರು ಉಪಸ್ಥಿತರಿದ್ದರು.

ನಂತರ ಭಕ್ತರು ಭಕ್ತರು ಪೈಪೋಟಿಯಲ್ಲಿ ರಥವನ್ನು ಎಳೆಯಲಾರಂಭಿಸಿದರು. ಈ ನಡುವೆ ಅಲ್ಲಲ್ಲಿ ನಿರ್ಮಿಸಲಾಗಿದ್ದ ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಹಾಲು, ಬೆಣ್ಣೆ, ಮೊಸರು, ಕಜ್ಜಾಯದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಹಾರಿ ಕೋಲಿನಿಂದ ಒಡೆದು ಬಾಯಿ ಬಡಿದುಕೊಂಡು ಕುಣಿದಾಡುತ್ತಾ ಕೃಷ್ಣನ ಬಾಲ್ಯದ ಲೀಲೆಗಳನ್ನು ನೆನಪಿಸಿದರು.

ಸಾವಿರಾರು ಭಕ್ತರ ನಡುವೆ ರಥ ಮೇಲೆ ಕುಳಿತಿದ್ದ ಸಾಲಂಕೃತ ಕೃಷ್ಣ ಕೈಮುಗಿದು ನಿಂತ ಜನರ ಭಕ್ತಿಯ ಕೇಂದ್ರವಾಗಿದ್ದರೇ, ರಥದ ಹಿಂದೆ ತಾಸೆ ಪೆಟ್ಟಿಗೆ ಮೈಮರೆತು ಕುಣಿಯುತ್ತಿದ್ದ ಹುಲಿವೇಷಗಳು ಉತ್ಸವದ ಮುಖ್ಯ ಆಕರ್ಷಣೆಯಾಗಿದ್ದವು.

ಪರ್ಯಾಯ ಶ್ರೀಗಳು ರಥಬೀದಿಯಲ್ಲಿ ಹಾಕಲಾಗಿದ್ದ ಎತ್ತರದ ವೇದಿಕೆಯಲ್ಲಿ ನಿಂತು ಬಾಲಕೃಷ್ಣನಿಗೆ ಸಮರ್ಪಣೆ ಮಾಡಿದ ಲಡ್ಡು, ಗುಂಡಿಟ್ಟು, ಚಕ್ಕುಲಿ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಅದನ್ನು ಪಡೆಯಲು ಜನರು ಉತ್ಸಹದಿಂದ ಮುಗಿಬಿದ್ದರು. 

ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವದ ನಂತರ, ಕೃಷ್ಣನ ಮಣ್ಣಿನ ವಿಗ್ರಹವನ್ನು ಪರ್ಯಾಯ ಶ್ರೀಗಳು ರಥಾವರೋಹಣಗೊಳಿಸಿ, ಮಠದೊಳಗೆ ಪೂಜೆ ಸಲ್ಲಿಸಿ, ನಂತರ ಮಧ್ವಸರೋವರದಲ್ಲಿ ವಿದ್ಯುಕ್ತವಾಗಿ ವಿಸರ್ಜನೆಗೊಳಿಸಿದರು. ಮಠದ ಶಿಷ್ಯರು ವಿಸರ್ಜನೆಗೊಳಿಸಿದ ಮೃಣ್ಮಯ ಮೂರ್ತಿಯನ್ನು ಪಡೆಯಲು, ಮಧ್ವಸರೋವರಕ್ಕೆ ಇಳಿದರು. ಶಿಷ್ಯರ ನಡುವೆ ಪೈಪೋಟಿ ನಡೆದು ಓರ್ವರು ಮೂರ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. 

ಕೃಷ್ಣ ಮಠಕ್ಕೆ ವಿಶೇಷ ಅಲಂಕಾರ

ಕೃಷ್ಣಮಠವನ್ನು ವಿವಿಧ ಹೂವುಗಳಿಂದ ಸಂಪೂರ್ಣವಾಗಿ ಅಲಂಕಾರ ಮಾಡಲಾಗಿತ್ತು. ಕೃಷ್ಣ ಮಠದ ಹೊರಗೆ, ಕನಕಗೋಪುರವನ್ನು ವಿಶೇಷವಾಗಿ ವಿದ್ದುದೀಪಾಲಂಕಾರ ಮಾಡಲಾಗಿತ್ತು. ಭಕ್ತರು ಕನಕಗೋಪುರ ಮುಂಭಾಗ ಮಾಡಲಾಗಿದ್ದ ವಿದ್ಯುತ್ ಅಲಂಕಾರದ ಮುಂದೆ ನಿಂತು ಸೆಲ್ಫಿ, ಪೋಟೋವನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 

ಬಿಗು ಭದ್ರತೆ: ಜಿಲ್ಲಾ ಎಸ್ಪಿಯವರ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಎಸ್ಪಿ, ಒಬ್ಬರು ಡಿವೈಎಸ್ಪಿ, 4 ಮಂದಿ ಇನ್ಸ್‌ಪೆಕ್ಟರ್, 200 ಪೋಲಿಸ್ ಸಿಬ್ಬಂದಿ, 50 ಜನ ಹೋಮ್ ಗಾರ್ಡ್, 4 ರಾಜ್ಯ ಸಶಸ್ತ್ರ ಮೀಸಲು ಪಡೆ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಶ್ವಾನದಳ, ಎಲ್ಲಾ ಗೇಟ್ ಗಳಲ್ಲೂ ತಪಾಸಣೆ ನಡೆಸಲಾಗುತ್ತಿತ್ತು. ರಥಬೀದಿ ಸಹಿತ ಕೃಷ್ಣ ಮಠದ ಸುತ್ತಲೂ 15 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಹಾಕಿ ಕಣ್ಗಾವಲು ಇಡಲಾಗಿತ್ತು‌. ಕಳ್ಳರ ಬಗ್ಗೆ ಎಚ್ಚರಿಕೆ ಬ್ಯಾನರ್ ಗಳನ್ನು ಅಲ್ಲಲ್ಲಿ ಅಳವಡಿಸಲಾಗಿತ್ತು. 

ಸಾವಿರಾರು ಜನರಿಗೆ ಅನ್ನಸಂತರ್ಪಣೆ: ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಕೃಷ್ಣನ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ನಡೆಯುತ್ತಿದೆ. ಎಲ್ಲಿ ನೋಡಿದರೂ ಹುಲಿಗಳ ಕಲರವ. ಮಹಿಳಾ ಹುಲಿವೇಷಗಳು ಪುರುಷರ ಹುಲಿ ವೇಷಗಳಿಗೆ ಫೈಟ್ ಕೊಡುತ್ತಿವೆ. 

ಅಷ್ಟಮಿ ವಿಟ್ಲಪಿಂಡಿ ಉತ್ಸವದಲ್ಲಿ ಭಾಗವಹಿಸಲೆಂದೇ ಹೊರ ಜಿಲ್ಲೆ, ರಾಜ್ಯದಿಂದ ಭಕ್ತರು ಆಗಮಿಸಿತ್ತಾರೆ. ರಥಬೀದಿಯಲ್ಲಿ ಕಿಕ್ಕಿರಿದು ತುಂಬಿದ ಜನಸಂದಣಿಯಲ್ಲಿ ರಥವನ್ನೇರಿ ತೆರಳುವ ಬಾಲಕೃಷ್ಣನನ್ನು ನೋಡಲು ಸಾವಿರಾರು ಜನರು ಕಣ್ತುಂಬಿಕೊಳ್ಳುತ್ತಾರೆ. 

ಮುದ್ದುಕೃಷ್ಣ ಸ್ಪರ್ಧೆಯೂ ಅಷ್ಟಮಿಯ ವಿಶೇಷಗಳಲ್ಲೊಂದು. ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಮುದ್ದುಕೃಷ್ಣ ಸ್ಪರ್ಧೆಗೆ ವಿಶೇಷ ಪ್ರಾಮುಖ್ಯತೆ ಇದೆ. ಸ್ವತಃ ಪರ್ಯಾಯ ಶ್ರೀಗಳೇ ಬಂದು ಮುದ್ದು ಕೃಷ್ಣರು ಮತ್ತು ಮುದ್ದು ರಾಧೆಯರನ್ನು ಆರ್ಶೀವದಿಸಿ, ಅವರೊಂದಿಗೆ ಕೆಲ ಕಾಲ ಕಳೆಯುತ್ತಾರೆ. ಈ ಹಿನ್ನಲೆಯಲ್ಲಿ ಕೃಷ್ಣನ ಸಮ್ಮುಖದಲ್ಲಿ ತಮ್ಮ ಇಷ್ಟದ ಕೃಷ್ಣನ ವೇಷಗಳನ್ನು ಮಕ್ಕಳಿಗೆ ತೊಡಿಸಿ ರಾಜಾಂಗಣದ ವೇದಿಕೆಯಲ್ಲಿ ಮಕ್ಕಳು ನಲಿಯುವುದನ್ನು  ವೀಕ್ಷಿಸಿ ಖುಷಿ ಪಡುತ್ತಾರೆ. 

ಬೆಳಗಾವಿಯಿಂದ ಕುಟುಂಬವೊಂದು ಉಡುಪಿಗೆ ಆಗಮಿಸಿ, ರಾಜಾಂಗಣದ ವೇದಿಕೆಯಲ್ಲಿ ತಮ್ಮ ಕುಟುಂಬದ ಪುಟಾಣಿಗಳ ಕೃಷ್ಣನ ವೇಷದ ಪ್ರದರ್ಶನವನ್ನು ಕಣ್ತುಂಬಿಕೊಂಡರು. 

ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋ ನ ಡಾನ್ಸರ್ ಶ್ರೇಯಾ ಆಚಾರ್ಯ ಮುಂಬೈನಿಂದ ಬಂದು ಹುಲಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಹುಲಿ ವೇಷ ತಂಡ ಕೊಂಬೆ ಕುಣಿತ ತಂಡಗಳ ಜೊತೆ ನಗರದ ಅಲ್ಲಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಕಲೆ, ಸಂಸ್ಕೃತಿ ಸಂಪ್ರದಾಯ ಉಳಿಸೋಣ ಎಂದು ಸಂದೇಶ ಕೊಟ್ಟಿದ್ದಾರೆ.

ಶಟರ್ ಬಾಕ್ಸ್ ಖ್ಯಾತಿಯ ಸಚಿನ್, ಚೇತನ್, ನಿತೇಶ್, ಅಭಿ, ಸುದೀಪ್ ಐವರು ಗಳೆಯರು ಈ ಬಾರಿ ವಿಶೇಷ ವೇಷವನ್ನು ಧರಿಸಿ ನಗರ ಸಂಚಾರ ನಡೆಸುತ್ತಿದ್ದಾರೆ. ಹೊಸಬೆಳಕು ಆಶ್ರಮಕ್ಕೆ ಹಣ ಸಹಾಯ ಮಾಡಲು ಇವರುಗಳು ವೇಷವನ್ನು ಧರಿಸಿದ್ದು, 50 ಜನರು ಈ ತಂಡದಲ್ಲಿದ್ದಾರೆ. 

ಸಂಜೆ ವಿಟ್ಲಪಿಂಡಿ ಉತ್ಸವ ಆರಂಭವಾಗುತ್ತಿದ್ದಂತೆ ನಗರದಾದ್ಯಂತ ಸಂಚರಿಸುತ್ತಿದ್ದ ಹುಲಿವೇಷ ತಂಡಗಳು, ಪೇಪರ್ ವೇಷ, ಮಹಿಷಾಸುರರು ರಥಬೀದಿಗೆ ಪ್ರವೇಶಿಸಿ ರಥದ ಜೊತೆಗೆ ಸಾಗಿ ಬಂದರು. 

Leave a Reply

Your email address will not be published. Required fields are marked *

error: Content is protected !!