ಉಡುಪಿ: ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಜನ್ಮಾಷ್ಟಮಿ
ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಸೋಮವಾರ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.
ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಪೂಜೆಗೆ ಕೈಜೋಡಿಸಿದರು. ಸೋಮವಾರ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀಕೃಷ್ಣ ದೇವರ ದರ್ಶನ ಪಡೆದರು.
ಸೋಮವಾರ ರಾತ್ರಿ ನೈವೇದ್ಯ ಸಮರ್ಪಿಸಿ ಮಹಾಪೂಜೆ ನಡೆಸಿದ ಬಳಿಕ ಶ್ರೀಪಾದರು ಚಂದ್ರೋದಯದ ವೇಳೆ 12.07 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ನೇರಿದ್ದ ಭಕ್ತರಿಗೂ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು.
ಬೆಳಗ್ಗೆ 9 ರ ಸುಮಾರಿಗೆ ಶ್ರೀಪಾದರು ಮಧ್ವಮಂಟಪ ದಲ್ಲಿ ಮರದ ತೊಟ್ಟಿಲೊಳಗಿರುವ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಡೋಲು ಉತ್ಸವಕ್ಕೆ ಚಾಲನೆ ನೀಡಿದರು.
ಶ್ರೀಕೃಷ್ಣಮಠವನ್ನು ಸಂಪೂರ್ಣವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ಮಧ್ವಮಂಟಪದಲ್ಲಿ ಕೃಷ್ಣವೇಷ ಸ್ಪರ್ಧೆಗೆ ನೂರಾರು ಮುದ್ದು ಮಕ್ಕಳು ಭಾಗವಹಿಸಿದ್ದರು. ಶ್ರೀಪಾದರು ಏಕಾದಶಿಯಂತೆ ಉಪವಾಸದಲ್ಲಿದ್ದು, ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ, ತುಳಸಿ ಅರ್ಚನೆ ನಡೆಸಿದರು. ಯತಿದ್ವಯರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು.
ಇಂದು ಸಂಭ್ರಮದ ಶ್ರೀ ಕೃಷ್ಣ ಲೀಲೋತ್ಸವ
ಮಂಗಳವಾರ ಶ್ರೀ ಕೃಷ್ಣ ಲೀಲೋತ್ಸವ ಪ್ರಯುಕ್ತ ಗೊಲ್ಲರು ಸಾಂಪ್ರದಾಯಿಕ ವಸ್ತ್ರ ಧರಿಸಿ ರಥಬೀದಿಯಲ್ಲಿ ಮೊಸರು, ಅರಶಿನ ಕುಂಕುಮ ಹಾಗೂ ಅರಳು ಹುಡಿ ತುಂಬಿದ ಕುಡಿಕೆಗಳನ್ನು ಒಡೆದು ಸಂಭ್ರಮಿಸುತ್ತಾರೆ. ಶ್ರೀ ಅನಂತೇಶ್ವರ ಹಾಗೂ ಶ್ರೀ ಚಂದ್ರಮೌಳೀಶ್ವರ ದೇಗುಲದ ವತಿಯಿಂದ 6 ಗುರ್ಜಿ ಹಾಗೂ ಶ್ರೀ ಕೃಷ್ಣ ಮಠದಿಂದ 7 ಗುರ್ಜಿ ಅಳವಡಿಸಲಾಗಿದೆ. ಲಕ್ಷಾಂತರ ಭಕ್ತರು ಲೀಲೋತ್ಸವದಲ್ಲಿ ಭಾಗಿಯಾಗುವರು. ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.
ಅಪರಾಹ್ನ 3 ಕ್ಕೆ ಉತ್ಸವ ಆರಂಭವಾಗಿ ಮಧ್ವ ಸರೋವರದಲ್ಲಿ ತೀರ್ಥಸ್ನಾನ ಮಾಡಿ ಸಂಪನ್ನವಾಗಲಿದೆ. ಮೆರವಣಿಗೆ, ಸಾಂಸ್ಕೃತಿಕ, ಹುಲಿ ವೇಷಗಳ ಪ್ರದರ್ಶನ ಸಹಿತ ಜಾನಪದ ವೇಷಧಾರಿಗಳ ತಂಡಗಳು ಗಮನ ಸೆಳೆಯಲಿವೆ. ಬೆಳಗ್ಗೆ 11 ಗಂಟೆಯಿಂದ ಭಕ್ತರಿಗೆ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸಿದ ಅನ್ನಪ್ರಸಾದ ವಿತರಣೆ ನಡೆಯಲಿದೆ.