ಗೃಹಲಕ್ಷ್ಮೀ ಹಣದಲ್ಲಿ ಊರಿಗೆ ಊಟ ಹಾಕಿದ್ದ ಮಹಿಳೆಯನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬುವರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಕಳೆದ ಹತ್ತು ತಿಂಗಳಿನಿಂದ ಕೂಡಿಟ್ಟಿದ್ದ ಹಣದಲ್ಲಿ ಊರಿನ ಜನಕ್ಕೆ ಹೋಳಿಗೆ ಊಟ ಹಾಕಿಸಿದ್ದರು.
ಹತ್ತು ತಿಂಗಳಿಂದ ಕೂಡಿಟ್ಟಿದ್ದ 20 ಸಾವಿರ ರೂಪಾಯಿಯಲ್ಲಿ ಹಿರಿಯ ಮಹಿಳೆ ಅಕ್ಕಾತಾಯಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿದ್ದನ್ನು ಪ್ರಶಂಸಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಳಿಗೆಯ ರುಚಿಯನ್ನು ಸವಿದರು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಸದಾ ಅಧಿಕಾರದಲ್ಲಿದ್ದು ಒಳಿತಾಗಲೆಂದು ಪ್ರಾರ್ಥಿಸಿ ಈ ಕಾರ್ಯ ಮಾಡಿದ್ದಾಗಿ ತಿಳಿದು ಮನತುಂಬಿ ಬಂತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಿರಿಯ ಜೀವದ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿ, ಅವರಿಗೆ ಸನ್ಮಾನಿಸಿ ಗೌರವ ಸೂಚಿಸಲಾಗಿದೆ ಎಂದರು. ಸಂಗೊಳ್ಳಿಯ ಶಕ್ತಿ ಯೋಜನೆಯ ಫಲಾನುಭವಿಯನ್ನು ಇದೇ ರೀತಿ ಸನ್ಮಾನಿಸಿದ್ದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.
ನಾಡಿಗೆ ಅನ್ನ ಕೊಡೋ ದೊರೆ ನೀನು. ನಿಮ್ಮ ಕೈ ಇನ್ನೂ ಮೇಲಾಗ್ಲಿ ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದು ಅಕ್ಕಾತಾಯಿ ಅರಸಿದರು. ಇದೇ ವೇಳೆ ಅಕ್ಕಾತಾಯಿ ಜೊತೆ ಬಂದಿದ್ದ ಇತರೆ ತಾಯಂದಿರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ, ನಾವು ಲಕ್ಷ್ಮೀದೇವಿಗೆ ಪೂಜೆ ಮಾಡೀವಿ. ಕಂಟಕ ನಾಶ ಆಗ್ಲಿ ಅಂತ ದೇವಿಗೆ ಕೈಮುಗಿದೀವಿ ಎಂದು ಹಾರೈಸಿದರು. ಅಕ್ಕಾತಾಯಿ ಮತ್ತು ಗ್ರಾಮದ ತಾಯಂದಿರು ಆಶೀರ್ವಾದ ಸ್ವೀಕರಿಸಿದ ಮುಖ್ಯಮಂತ್ರಿಗಳು ನಿಮ್ಮ ಆಶೀರ್ವಾದ ಹೀಗೇ ಇರಲಿ. ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ. ಹೀಗೇ ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.