ಟೋಲ್‌ಗೇಟ್ ಸ್ಥಾಪನೆ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ: ವಿನಯ್ ಕುಮಾರ್ ಸೊರಕೆ

ಉಡುಪಿ, ಆ.26: ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿದ್ದ ಟೋಲ್‌ಗೇಟ್‌ನ್ನು ಏಕಾಏಕಿ ರದ್ದುಪಡಿಸಲು ಸಾಧ್ಯವಿಲ್ಲದ ಕಾರಣ, ಸಚಿವ ಸತೀಶ್ ಜಾರಕಹೊಳಿ ಅವರು ಪ್ರಕ್ರಿಯೆಗೆ ತಾತ್ಕಾಲಿಕ ತಡೆವಿಧಿಸಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಲ್‌ಗೇಟ್‌ಗೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳು ಈಗ ಸ್ಥಗಿತಗೊಂಡಿದೆ. ಕಾನೂನು ಸೇರಿದಂತೆ ವಿವಿಧ ಸಮಸ್ಯೆಗಳಿರುವುದರಿಂದ ನಿಧಾನವಾಗಿ ಅದನ್ನು ರದ್ದುಪಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದರು.

ರಾಜ್ಯದ ಇನ್ನೂ ನಾಲ್ಕು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆ ಯಾವುದೇ ಸಮಸ್ಯೆ ಇಲ್ಲದೇ ನಡೆಯುತ್ತಿದೆ. ಈಗ ಇದನ್ನು ಒಮ್ಮಿಂದೊಮ್ಮೆಗೆ ರದ್ದುಪಡಿಸಿದರೆ ಉಳಿದ ಕಡೆಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಅಲ್ಲದೇ ಗುತ್ತಿಗೆದಾರರೊಂದಿಗೆ ಮೊದಲೇ ಒಪ್ಪಂದವಾಗಿರುವುದರಿಂದ ಅವರು ನ್ಯಾಯಾಲಯದ ಮೆಟ್ಟಲು ಏರಲು ಸಾಧ್ಯವಿದೆ ಎಂದರು.

ಬಿಜೆಪಿ ಕೊಡುಗೆ: ಈ ಟೋಲ್‌ಗೇಟ್ ಬಿಜೆಪಿ ಸರಕಾರದ ಕೊಡುಗೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಹೆದ್ದಾರಿಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿ ತ್ತು. ಅದರಲ್ಲಿ ಅವರಿಗೆ ಟೋಲ್ ಸಂಗ್ರಹಿಸುವ ಅವಕಾಶವನ್ನೂ ನೀಡಲಾಗಿತು ಎಂದು ಸೊರಕೆ ಬಹಿರಂಗ ಪಡಿಸಿದರು.

ಒಪ್ಪಂದದಂತೆ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ನಿರ್ಮಾಣಗೊಳ್ಳಬೇಕಿತ್ತು. ಆದರೆ ಅಲ್ಲಿ ದೊಡ್ಡಮಟ್ಟದ ಪ್ರತಿರೋಧ ಬಂದ ಕಾರಣ ಕಂಚಿನಡ್ಕಕ್ಕೆ ಸ್ಥಳಾಂತರಿಸಲಾಗಿತ್ತು ಎಂದರು.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಕೇವಲ 28ಕಿ.ಮೀ. ಇದೆ. ಇದರಲ್ಲಿ ಎಲ್ಲೇ ಆದರೂ ಟೋಲ್ ಸಂಗ್ರಹಿಸುವುದಕ್ಕೆ ಕಾಂಗ್ರೆಸ್ ವಿರೋಧವಿದೆ. ಕಾನೂನಿನಂತೆ 60ಕಿ.ಮೀ. ದೂರಕ್ಕೆ ಟೋಲ್ ಸಂಗ್ರಹಿಸಬಹುದು. ಇಲ್ಲಿ 3-4ಕಿ.ಮೀ. ದೂರದ ಹೆಜಮಾಡಿ ರಾಷ್ಟ್ರೀಯ ಹೆದ್ದಾರೆಯಲ್ಲಿ ಟೋಲ್ ಸಂಗ್ರಹವಾಗುತ್ತಿದೆ. ಹೀಗಾಗಿ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹ ತರ್ಕ ಬದ್ಧವಲ್ಲ ಎಂದರು.

ಮಂಗಳೂರಿನಿಂದ ಕಾರ್ಕಳಕ್ಕೆ ತೆರಳಲು ಈಗ ಜನ ಪಡುಬಿದ್ರಿ ರೋಡ್‌ನ್ನು ಬಳಸುತಿದ್ದಾರೆ. ಟೋಲ್ ಆದರೆ ಇಲ್ಲಿಗೆ ಬರದೇ ಮೂಡಬಿದ್ರೆ ಮೂಲಕ ತೆರಳಬಹುದು. ಹೀಗಾಗಿ ಇಲ್ಲಿ ಟೋಲ್ ಸಂಗ್ರಹಕ್ಕೆ ಕಾಂಗ್ರೆಸ್ ವಿರೋಧವಿದೆ. ಇದನ್ನು ನಾವು ಸಚಿವರಿಗೂ ತಿಳಿಸಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ನವೀನಚಂದ್ರ ಅಡ್ವೆ, ಶರ್ಫುದ್ದೀನ್ ಶೇಖ್, ರಮೀಜ್ ಹುಸೇನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!