ದೀಪಾವಳಿ ವೇಳೆ ಪಟಾಕಿ ಬ್ಯಾನ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮಾಡಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ ಹಾಗೂ ಪಟಾಕಿ ಹಚ್ಚುವಂತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಶೀಘ್ರವೇ ಸರ್ಕಾರ ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದ್ದಾರೆ. ಇನ್ನೂ ಸರ್ಕಾರದ ನಿರ್ಧಾರದಿಂದ ಪಟಾಕಿ ಮಾರಾಟಾರರಿಗೆ ಮತ್ತು ಪಟಾಕಿ ಖರೀದಿಸಿದ್ದವರಿಗೆ ಶಾಕ್ ಉಂಟಾಗಿದೆ.
ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿರುವ ನಿರ್ಧಾರಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಸರವಾದಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಸಂಪ್ರದಾಯವಾದಿಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಪಟಾಕಿ ಸಿಡಿಸುವುದರಿಂದ ಪರಿಸರ ಹಾನಿ ಆಗುತ್ತದೆ ಎಂದರೆ ಪರಿಸರಕ್ಕೆ ಹಾನಿಯಾಗುವ ಎಲ್ಲವನ್ನೂ ನಿಷೇಧ ಮಾಡಿ ಎಂಬುವುದು ಸಂಪ್ರದಾಯವಾದಿಗಳ ವಾದವಾಗಿದೆ.