ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್‌ನ ಹೆಜ್ಜೆ ಗುರುತು…
ಕುಂದಾಪುರ: ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನಿ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ ಈ ಅರ್ಥ ಗರ್ಭಿತವಾದ ಸಾಲುಗಳನ್ನು ಕೇಳಿದಾಗ ಡಾ. ಉಮೇಶ್ ಪುತ್ರನ್ ಅವರ ಹೆಸರು ನೆನಪಿಗೆ ಬರುತ್ತದೆ. ಅರೇ ಈ ಹಾಡಿನ ಸಾಹಿತಿ ಚಿ.ಉದಯ ಶಂಕರ್ ಅವರು ಆಗಿರುವಾಗ ಡಾ.ಉಮೇಶ್ ಪುತ್ರನ್ ಅವರು ಯಾಕೆ ನೆನಪಿಗೆ ಬರುತ್ತಾರೆ ಅನ್ನೊ ಗೊಂದಲ ಕೆಲವರಿಗೆ ಬರಬರಬಹುದು ಅದಕ್ಕೂ ಕಾರಣ ಇದೆ.
ಡಾ. ಉಮೇಶ್ ಪುತ್ರನ್ ಅವರು ಕನ್ನಡ ರಥ ಎಳೆಯುತ್ತಿರುವ ವೈದ್ಯ ಸಾಹಿತಿ, ಹೌದು ಇವರು ವೃತ್ತಿಯಲ್ಲಿ ಹೆಸರಾಂತ ವೈದ್ಯರು ಆದರೆ ಅವರು ಪ್ರವೃತ್ತಿಯಲ್ಲಿ ಓರ್ವ ಕನ್ನಡ ಸಾಹಿತಿ. ವೈದ್ಯಲೋಕದ ಬಿಡುವಿಲ್ಲದ ಕೆಲಸದ ನಡುವೆಯೂ ಇವರ ಕನ್ನಡಾಭಿಮಾನ, ಕನ್ನಡ ಸಾಹಿತ್ಯಕ್ಕೆ ನೀಡುತ್ತಿರುವ ಸೇವೆ ಅಪಾರವಾದ್ದು, ಡಾ.ಉಮೇಶ್ ಪುತ್ರನ್ ಅವರ ನೇತೃತ್ವದಲ್ಲಿ ಕುಂದಾಪುರದೆಲ್ಲೆಡೆ ಕನ್ನಡದ ಸೇವೆ ಯಜ್ಞ ರೂಪದಲ್ಲಿ ನಡೆಯುತ್ತಿದೆ. ಇದು ಕನ್ನಡದ ಸೇವೆ ಮಾಡ ಬಯಸುವವರಿಗೆ ಮಾದರಿಯಾಗಿದೆ. ಹೀಗಿರುವಾಗ ಮೇಲಿನ ಸಾಲುಗಳು ಇವರಿಗಾಗಿಯೇ ಹೇಳಿ ಮಾಡಿಸಿದಂತಿದೆ ಅಲ್ಲವೆ.
ಸದಾ ಹಸನ್ಮುಖಿ, ಮೃದುಭಾಷಿ, ಸರಳ ಸ್ವಭಾವದ ಡಾ. ಉಮೇಶ್ ಪುತ್ರನ್ ಅವರು, ಬಾಲ್ಯದ ಬಡತನದ ನಡುವೆಯೂ ನಿಸರ್ಗದತ್ತ ಬದುಕಿನ ಒಲವನ್ನು ಹೊಂದಿದ್ದವರು. ಮಹಾಮಾರಿ ಏಡ್ಸ್, ವೃತ್ತಿ ಮಾರ್ಗದರ್ಶನ, ಸ್ವಾತಂತ್ರ್ಯದ ಆ ಕ್ಷಣಗಳು ಇವರ ಪ್ರಕಟಿತ ಕೃತಿಗಳು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇವರ ಹಲವಾರು ಲೇಖನ ಚಿಂತನೆಗಳು ಮೂಡಿಬಂದಿವೆ. ಅಲ್ಲದೆ ಇವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಅನೇಕರ ಬದುಕು ರೂಪಿಸಿದ್ದಾರೆ.
ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ 2023ರ ಆ.13ರಂದು ವಿಜಯ ಕರ್ನಾಟಕ ಸಹಯೋಗದಲ್ಲಿ ಮೊದಲ ಬಾರಿಗೆ ಕೋಟೇಶ್ವರದಲ್ಲಿ ಇವರು ಆಯೋಜಿಸಿದ್ದ ವೈದ್ಯ ಸಾಹಿತ್ಯ ಸಮ್ಮೇಳನ ನಾಡಿನ ಗಮನ ಸೆಳೆದಿತ್ತು, ವೈದ್ಯರಲ್ಲಿನ ವಿಶಾಲ ಸಾಹಿತ್ಯ ಲೋಕದ ಪರಿಚಯ ಈ ಸಮ್ಮೇಳನದ ಮೂಲಕ ಅನಾವರಣಗೊಂಡಿತ್ತು. ಹಾಗೂ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲರವ, ಯಕ್ಷಗಾನದ ಮೂಲಕ ಕನ್ನಡದ ಸಂಭ್ರಮ, ಯಕ್ಷ ಸಾಧಕರಿಗೆ ಗೌರವ ಸಹಿತ ವೈವಿಧ್ಯಮಯ ಕಾರ್ಯಕ್ರಮ ರೂಪಿಸಿ ಜನಮನ್ನಣೆ ಗಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ನೆದರ್ಲೆಂಡ್ ಪ್ರಜೆ, ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಯ ಸ್ವಯಂಸೇವಕಿ ಕುಂದಾಪ್ರ ಕನ್ನಡದಲ್ಲಿ ಸುಲಲಿತವಾಗಿ ಮಾತನಾಡುವ ಕನ್ನಡಪ್ರೇಮಿ ಮಾರ್ಜೆ ವ್ಯಾನ್‍ಡೆನ್ ಬ್ರಾಂಡ್ ಅವರನ್ನು ಗುರುತಿಸಿ ಗೌರವಿಸಿದ್ದು ಗಮನ ಸೆಳೆದಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಉಮೇಶ್ ಪುತ್ರನ್ ಅವರ ನೇತೃತ್ವದ ತಂಡವು ಅತ್ಯುತ್ತಮವಾದ ಕಾರ್ಯಗಳನ್ನು ನಡೆಸುತ್ತಿದ್ದು ಕನ್ನಡ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಹೆಜ್ಜೆ ಗುರುತು
2023 ರ ಆ.13ರಂದು ಕೋಟೇಶ್ವರದ ಯುವ ಮೆರಿಡಿಯನ್ ಹಾಲ್‍ನಲ್ಲಿ ವೈದ್ಯರ ಸೇವೆಯನ್ನು ಗುರುತಿಸುವ ವೈದ್ಯ ಸಾಹಿತ್ಯ ಸಮ್ಮೇಳನ “ಆಪ್ತ” ಆಯೋಜಿಸಿ ಕುಂದಾಪುರದಲ್ಲಿ ಜನಮನ್ನಣೆ ಪಡೆದಿದ್ದಾರೆ. ಆ ಬಳಿಕ ಆ.26 ರಂದು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಆಯೋಜಿಸಿದ್ದರು.
2023ರ ನ.18 ರಂದು ಕಾಳಾವರದ ಕೆ.ಕೆ ಕಾಳಾವಾರ್ಕಾರ್ ಅವರ ಮನೆಯಲ್ಲಿ ಹಿರಿಯರೆಡೆಗೆ ನಮ್ಮ ನಡೆಗೆ (ಸಾಹಿತಿ ಕೆ.ಕೆ ಕಾಳಾವಾರ್ಕಾರ್) ಕಾರ್ಯಕ್ರಮ, ಆ.19 ರಂದು ಬನ್ನೂರಿನ ಸೈಂಟ್ ಫಿಲಿಪ್ ನೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಕಲರವ ಕಾರ್ಯಕ್ರಮ ನಡೆಸಲಾಯಿತು. ನ.25ರಂದು ಕೋಣಿಯ ಮಾನಸಜದಲ್ಲಿ ಜ್ಯೋತಿವಿಶೇಷ ಮಕ್ಕಳ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ನೆಲೆಯಲ್ಲಿ ಕನ್ನಡ ಪ್ರೇಮಿ ನೆದರ್ಲೆಂಡ್ ಪ್ರಜೆ ಮಾರ್ಜೆ ವ್ಯಾನ್‍ದೆನ್ ಬ್ರಾಂಡ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಡಿ.10 ರಂದು ಕುಂದಾಪುರದ ಸ.ಪ.ಪೂ ಕಾಲೇಜಿನ ಕಲಾಮಂದಿರದಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ಭಾಗವತರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನವು ಕುಂದಾಪುರ ಮತ್ತು ಗಂಗೊಳ್ಳಿಯಲ್ಲಿ ನಡೆದಿದ್ದು ಈ ನಮ್ಮೇಳನಕ್ಕೆ ಅನೇಕ ಜನ ಕನ್ನಡ ಅಭಿಮಾನಿಗಳು ಬಂದಿದ್ದು ಕನ್ನಡಾಭಿಮಾನಿಗಳಿಂದ ಸೈ ಎನಿಸಿಕೊಂಡಿತು.