ಮತ್ತೊಂದು ಸಚಿವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ((KIADB) ಹಗರಣಕ್ಕೆ ಸಂಬಂಧಿಸಿದಂತೆ ಭಾರಿ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶುಕ್ರವಾರ ದೂರು ಸಲ್ಲಿಕೆಯಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಹಿನ್ನೆಡೆಯಾಗಿದೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ ಭವನದಲ್ಲಿ ದೂರು ದಾಖಲಿಸಿದ್ದಾರೆ. ಸಚಿವ ಎಂ.ಬಿ. ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಮುಡಾ ನಿವೇಶನ ಹಗರಣದಲ್ಲಿ ಸಿಎಂ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿರುವ ಎಂಬಿ ಪಾಟೀಲ್ ಗೆ ಇದು ಹಿನ್ನಡೆಯಾಗಿದೆ.

ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಘೋಷಿಸಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸಿರುವ ನಿರ್ಣಾಯಕ ಸಮಯದಲ್ಲಿ ಈ ದೂರು ದಾಖಲಾಗಿದೆ.

ಸಚಿವ ಎಂಬಿ ಪಾಟೀಲ್ ಕೆಐಎಡಿಬಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿಯಮಗಳ ಪ್ರಕಾರ ಆನ್ ಲೈನ್ ನಲ್ಲಿ ಪ್ರಕ್ರಿಯೆ ನಡೆಸಬೇಕಾಗಿತ್ತು. ಆದರೆ ಸಚಿವ ಪಾಟೀಲ್ ಕೈಗಾರಿಕೆಗಳನ್ನು ನಡೆಸದ ಕಂಪನಿಗಳಿಗೆ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನಗರಕ್ಕೆ ಸಮೀಪವಿರುವ ಬಿಡದಿ, ವಸಂತನರಸಾಪುರ, ಕೋಲಾರ ನರಸಾಪುರ, ದೊಡ್ಡಬಳ್ಳಾಪುರ ಮುಂತಾದ ಕೈಗಾರಿಕಾ ಪ್ರದೇಶಗಳ ನಿವೇಶನ ಹಂಚಿಕೆಯಲ್ಲಿ ಅಕ್ರಮವೆಸಗಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಕಡೆಗಣಿಸಿ ನಿಯಮ ಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರ ಕಾರ್ಯಕ್ಕೆ ಕೆಲವು ಅಧಿಕಾರಿಗಳು ಬೆಂಬಲ ನೀಡಿದ್ದಾರೆ. ಈ ಅಕ್ರಮ ಹಂಚಿಕೆಯಿಂದ ಕೆಐಎಡಿಬಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಏಳು ಪುಟಗಳ ದೂರಿನಲ್ಲಿ ಸುಮಾರು 39 ಕಂಪನಿಗಳ ಪಟ್ಟಿ ನೀಡಲಾಗಿದ್ದು, ಅವುಗಳಿಗೆ ಸಿಎ ಸೈಟ್ ನೀಡಲಾಗಿದೆ. ಯಾವುದೇ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ. ಅಲ್ಲದೇ ಸಿಎ ಸೈಟ್‌ಗಳನ್ನು ಹಂಚಿಕೆ ಮಾಡಲು ನಕ್ಷೆಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

”ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸುವುದು ಅವಶ್ಯವಾಗಿದೆ. ಸಚಿವ ಎಂ.ಬಿ. ಪಾಟೀಲ್ ಅಧಿಕಾರ ದುರುಪಯೋಗಪಡಿಸಿ ಕೊಂಡು ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಡಿ ಕ್ರಿಮಿನಲ್ ಅಪರಾಧ ಎಸಗಿದ್ದಾರೆ. ಆದ್ದರಿಂದ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಮತ್ತು 19 ಮತ್ತು ಬಿಎನ್‌ಎಸ್‌ ನ ಸೆಕ್ಷನ್ 218 ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಬೇಕು ಎಂದು ದೂರುದಾರರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!