ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನಮ್ಮ ಗುರಿ- ಪ್ರಭಾಕರ್ ಪೂಜಾರಿ
ಉಡುಪಿ: ಉಡುಪಿ ನಗರಸಭೆ 10ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಗುಂಡಿಬೈಲು ವಾರ್ಡಿನ ಬಿಜೆಪಿ ಸದಸ್ಯ ಪ್ರಭಾಕರ್ ಪೂಜಾರಿ ಅಧ್ಯಕ್ಷರಾಗಿ ಹಾಗು ಒಳಕಾಡು ವಾರ್ಡಿನ ಬಿಜೆಪಿ ಸದಸ್ಯೆ ರಜನಿ ಹೆಬ್ಬಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು.
ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ ನ ಪ್ರಭಾಕರ ಪೂಜಾರಿ ಹಾಗು ಒಳಕಾಡು ವಾರ್ಡಿನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು. ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು. ಚುನಾವಣಾಧಿಕಾರಿ ಹಾಗು ಸಹಾಯಕ ಕಮೀಷನರ್ ಮಹೇಶ್ಚಂದ್ರ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಗರಸಭಾ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.
ಕೊನೆಯ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡಿದ್ದ ಚುನಾವಣೆಯಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿಯ ಎಲ್ಲಾ ನಗರಸಭಾ ಸದಸ್ಯರ ವೈಯಕ್ತಿಕ ಅಭಿಪ್ರಾಯವನ್ನು ಪಡೆದು ಒಮ್ಮತದ ನಿರ್ಣಯದಿಂದ ಶುಕ್ರವಾರ ಬೆಳಗ್ಗೆ ರಾಜ್ಯ ಬಿಜೆಪಿಯ ವೀಕ್ಷಕರಾಗಿ ಜಿಲ್ಲೆಗೆ ಆಗಮಿಸಿದ್ದ ಗಣೇಶ್ ಕಾರ್ಣಿಕ್ ಅಂತಿಮ ಹೆಸರನ್ನು ಘೋಷಿಸಿದ್ದರು. ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಸೇರಿದಂತೆ ಮೊದಲಾದವರು ಕೋರ್ ಕಮಿಟಿಯಲ್ಲಿದ್ದರು.
ಉಡುಪಿ ನಗರಸಭೆ ಒಟ್ಟು 35 ಸದಸ್ಯ ಬಲ ಹೊಂದಿದ್ದು, ಬಿಜೆಪಿಯ 32 ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ 03 ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ಪ್ರಕಟವಾಗಿತ್ತು.
ನಗರಸಭಾ ಸದಸ್ಯರು, ಬಿಜೆಪಿಯ ಪ್ರಮುಖರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ, ಕಿರಣ್ ಕುಮಾರ್ ಬೈಲೂರು, ದಿನಕರ್ ಶೆಟ್ಟಿ ಹೆರ್ಗ, ಮಟ್ಟಾರ್ ರತ್ನಾಕರ್ ಹೆಗ್ಡೆ, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ರಶ್ಮೀ ಶೆಟ್ಟಿ, ಸೇರಿದಂತೆ ಮೊದಲಾದವರು ಶುಭ ಹಾರೈಸಿದರು.
ವಿದ್ಯುತ್ ಬಿಲ್ ಗಿಂತಲೂ ನೀರಿನ ಬಿಲ್ಲಿನ ಮೊತ್ತ ಜಾಸ್ತಿಯಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಬಿಲ್ ಗಳನ್ನು ಪುನರ್ ಪರಿಶೀಲಿಸಲಾಗುವುದು. ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನೀರಿನ ಅದಾಲತ್ ನಡೆಸಲಾಗುವುದು. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನಮ್ಮ ಗುರಿಯಾಗಿದೆ. ಯುಜಿಡಿ ಸಮಸ್ಯೆಗಳಿಗೆ ಯೋಜನೆಯೂ ಡಿಪಿಆರ್ ಹಂತದಲ್ಲಿದೆ. ನಗರಸಭೆಗೆ ನೂತನ ಕಟ್ಟಡ ನಿರ್ಮಾಣವಾಗಿಬೇಕಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು, ಸದಸ್ಯರು, ವಿರೋಧ ಪಕ್ಷ, ಅಧಿಕಾರಿಗಳ ಸಹಕಾರದೊಂದಿಗೆ ನಡೆಸುತ್ತೇನೆ.
ಪ್ರಭಾಕರ್ ಪೂಜಾರಿ ನೂತನ ಅಧ್ಯಕ್ಷ ಉಡುಪಿ ನಗರಸಭೆ
ಕಳೆದ 18 ತಿಂಗಳಿನಿಂದ ಅಧಿಕಾರಿಗಳಿಂದ ನಗರಸಭೆ ಆಡಳಿತ ನಡೆಯುತ್ತಿತ್ತು. 2 ತಿಂಗಳಿಗೊಮ್ಮೆ ಸಭೆ ನಡೆಸಬೇಕಿದ್ದರೂ, 18 ತಿಂಗಳಲ್ಲಿ ಒಂದು ಸಭೆ ನಡೆದಿರುವುದು ದುರಂತ. ಈ ಹಳಿ ತಪ್ಪಿದ ರೈಲನ್ನು ಮತ್ತೆ ಸರಿಯಾಗಿ ಹಳಿಗೆ ತಂದು ಮುನ್ನಡೆಸುವ ಜವಾಬ್ದಾರಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷೆಯರದ್ದಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಿ..
ಯಶ್ಪಾಲ್ ಸುವರ್ಣ ಶಾಸಕ, ಉಡುಪಿ.
ಅಭಿವೃದ್ಧಿ ಕೆಲಸದಲ್ಲಿ ಯಾವುದೇ ರಾಜಕೀಯ ಮಾಡದೇ, ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಸಹಕಾರ ನೀಡುತ್ತೇವೆ. ಅವಿರೋಧವಾಗಿ ಆಯ್ಕೆಯಾದ ಇಬ್ಬರು ಸದಸ್ಯರಿಗೆ ಧನ್ಯವಾದಗಳು.
ರಮೇಶ್ ಕಾಂಚನ್ ನಗರಸಭೆ ವಿಪಕ್ಷ ನಾಯಕ.
ಪ್ರಭಾಕರ್ ಪೂಜಾರಿಯವರು ಮೂರು ಬಾರಿ ಗುಂಡಿಬೈಲು ವಾರ್ಡಿನಿಂದ ಚುನಾವಣೆಗೆ ಸ್ಪರ್ಧಿಸಿದ್ದು ಒಂದು ಬಾರಿ ಸೋತು ಎರಡು ಬಾರಿ ಗೆದ್ದಿದ್ದಾರೆ. ಮೊದಲ ಬಾರಿಗೆ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ. ರಜನಿ ಹೆಬ್ಬಾರ್ ಮೊದಲ ಬಾರಿಗೆ ಒಳಕಾಡು ವಾರ್ಡಿನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಮೊದಲ ಬಾರಿಗೆ ಉಪಾಧ್ಯಕ್ಷೆ ಪಟ್ಟವನ್ನು ಏರಿದ್ದಾರೆ.