ರಾಜ್ಯಪಾಲರ ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡಿಸಿ ‘ಸಹಬಾಳ್ವೆ’ ವತಿಯಿಂದ ಪ್ರತಿಭಟನೆ
ಉಡುಪಿ: ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ತಾಹೋರ್ ಚಂದ್ ಗೆಹ್ಲೋಟ್ ಮುಡಾ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳ ದೂರಿನ ಅನ್ವಯ ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಸಹಬಾಳ್ವೆ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಸಹಬಾಳ್ವೆ ಸಂಘಟನೆಯ ಸಂಚಾಲಕ ಪ್ರೊ. ಫಣಿರಾಜ್ ಮಾತನಾಡಿ, ”ಈ ಪ್ರತಿಭಟನೆಯು ಆಡಳಿತ ಸರ್ಕಾರದ ಪರವಾಗಿ ಅಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರವಾಗಿಸಲು ನಡೆಯುತ್ತಿರುವ ಹುನ್ನಾರದ ವಿರುದ್ಧವಾಗಿದೆ” ಎಂದರು.
“2020 ರಲ್ಲಿ ನಡೆದಿದೆ ಎನ್ನಲಾದ ಮುಡಾ ಹಗರಣದ ಕುರಿತು ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯೇ ಆಗಿರಲಿಲ್ಲ. ಅಧಿಕಾರದಲ್ಲಿ ಇಲ್ಲದಾಗ ಹಗರಣ ನಡೆದಿದೆ ಎನ್ನುವುದನ್ನು ರಾಜ್ಯಪಾಲರು ನಂಬುವುದು ಹಾಸ್ಯಾಸ್ಪದ” ಎಂದು ಹೇಳಿದರು.
ವಿರೋಧ ಪಕ್ಷದಲ್ಲಿರುವ ಬಿಜೆಪಿಯ ಹಲವರು ಮಂದಿ ಅಂದು ಆಡಳಿತ ಪಕ್ಷದ ಭಾಗವಾಗಿದ್ದರು.
ಜಿ.ಟಿ ದೇವೇಗೌಡ ಆ ಸಂದರ್ಭದಲ್ಲಿ ಮುಡಾದ ಮುಖ್ಯಸ್ಥರಾಗಿದ್ದರು. ಆದರೆ ಪ್ರಸ್ತುತ ಯಾವುದೇ ಆಧಾರ ಇಲ್ಲದೇ ವಿರೋಧ ಪಕ್ಷ ಇದರ ಕುರಿತು ಆರೋಪ ಮಾಡುತ್ತಿದೆ ಎಂದು ಹೇಳಿದರು.
ಖಾಸಗಿ ವ್ಯಕ್ತಿಗಳು ಆಗಸ್ಟ್ 25 ರಂದು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್’ಗೆ ಮನವಿ ಕೊಡುತ್ತಾರೆ. ಒಂದೇ ಒಂದು ದಿನದಲ್ಲಿ ಪತ್ರ ಬರೆದು ಮಂತ್ರಿ ಮಂಡಲಕ್ಕೆ ಅವಕಾಶ ಕೊಡಬಹುದೇ ಎಂದು ಕೇಳಿದಾಗ ಕೊಡಬಾರದು ಎಂಬ ನಿರ್ಣಯ ತಿಳಿಸುತ್ತಾರೆ. ಅದರ ಹೊರತಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುತ್ತಾರೆ. ಈ ಹಿಂದೆ ಕೂಡ ರಾಜ್ಯಪಾಲರು ವಿವೇಚನೆ ಬಳಸಿ ನಿರ್ಧಾರ ಕೈಗೊಂಡ ಉದಾಹರಣೆಗಳಿವೆ. ಆದರೆ ಸ್ಪಷ್ಟವಾದ ಆಧಾರ, ಕಾನೂನಾತ್ಮಕ ಪ್ರಕ್ರಿಯೆ ಬಳಸಿ ನಿರ್ಣಯ ಕೈಗೊಳ್ಳುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಹಾಗೆ ನಡೆದಿಲ್ಲ ಎಂದರು.
ದೂರು ನೀಡಿದವರು ಪ್ರಾಧಿಕಾರಕ್ಕೆ ದೂರು ನೀಡದೆ ರಾಜ್ಯಪಾಲರಿಗೆ ನೇರ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ ಯಾವ ಪ್ರಾಧಿಕಾರ ಕೂಡ ಈ ಪ್ರಕರಣದ ತನಿಖೆ ನಡೆಸಿಲ್ಲ. ವರದಿ ಸಲ್ಲಿಸಿ ಪ್ರಾಸಿಕ್ಯೂಷನ್ ಗೆ ಕೇಳಿಲ್ಲ ಅದರ ಹೊರತಾಗಿ ರಾಜ್ಯಪಾಲರು ಕೇವಲ ಖಾಸಗಿ ವ್ಯಕ್ತಿಗಳ ದೂರಿನ ಆಧಾರದಲ್ಲಿ ತರಾತುರಿಯಲ್ಲಿ ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಜನರಿಂದ ಆಯ್ಕೆಯಾದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಅಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದವರು ಯಾವ ಕೃತ್ಯಕ್ಕೂ ಹೇಸುವವರಲ್ಲ..ಅದರ ಮುಂದುವರಿದ ಭಾಗವಾಗಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ನೋಡ ಬಹುದಾಗಿದೆ. ಇಂತಹ ನಿರ್ಣಯಗಳನ್ನು ಸಂವಿಧಾನ ಸ್ಥಾನದಲ್ಲಿ ಕುಳಿತು ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಒಳ್ಳೆಯದಲ್ಲ.ಯಾವ ಸರಕಾರ, ವ್ಯಕ್ತಿ ಇದ್ದರೂಈ ನಡೆ ಸರಿಯಿಲ್ಲ ಇದನ್ನು ಖಂಡಿಸಬೇಕು ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಫಾ.ವಿಲಿಯಂ ಮಾರ್ಟಿಸ್, ಮಂಜುನಾಥ್ ಗಿಳಿಯಾರ್, ಬಾಲಕೃಷ್ಣ ಶೆಟ್ಟಿ, ಇದ್ರಿಸ್ ಹೂಡೆ ಸೇರಿದಂತೆ ಹಲವಾರು ಮಂದಿ ಮಾತನಾಡಿದರು.
ನಂತರ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೆರೋನಿಕಾ ಕರ್ನೆಲಿಯೋ, ಯಾಸೀನ್ ಮಲ್ಪೆ, ಸುಂದರ್ ಮಾಸ್ತರ್, ಪ್ರಸಾದ್ ಕಾಂಚನ್, ಪ್ರಶಾಂತ್ ಜತ್ತನ್,ಅಝೀಜ್ ಉದ್ಯಾವರ, ಅಶ್ಫಾಕ್ ಕಾರ್ಕಳ, ಇಸ್ಮಾಯಿಲ್ ಕಿದೆವರ್, ಜಾಬೀರ್ ಖತೀಬ್ ಮುಹಮ್ಮದ್ ಗೌಸ್ ಕಾರ್ಕಳ, ಹುಸೇನ್ ಕೋಡಿಬೆಂಗ್ರೆ ಮತ್ತು ಮಂಜುನಾಥ್ ಗಿಳಿಯಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.