ಐವನ್ ಡಿಸೋಜಾ ಮನೆಗೆ ದುಷ್ಕರ್ಮಿಗಳಿಂದ ಕಲ್ಲೆಸೆತ- ಕೃಷ್ಣಮೂರ್ತಿ ಆಚಾರ್ಯ ಖಂಡನೆ
ಉಡುಪಿ: ಹಿರಿಯ ಕಾಂಗ್ರೆಸ್ ಮುಖಂಡ, ಎಂಎಲ್ ಸಿ ಐವನ್ ಡಿಸೋಜಾ ಇವರ ಮನೆಗೆ ತಡರಾತ್ರಿ ದುಷ್ಕರ್ಮಿಗಳು ಕಲ್ಲೆಸೆದ ಕೃತ್ಯವನ್ನು ಕಾಂಗ್ರೆಸ್ ಮುಖಂಡ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ತೀವ್ರವಾಗಿ ಖಂಡಿಸಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜಾ ಇವರ ಮನೆಗೆ ಕಲ್ಲು ಎಸೆದಿರುವುದು ದ್ವೇಷದ ರಾಜಕಾರಣ ಮತ್ತು ಶಾಂತಿ ಕದಡುವ ಹುನ್ನಾರವಾಗಿದೆ. ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಪರವಾಗಿ ನಡೆಸುತ್ತಿರುವುದನ್ನು ಸಹಿಸಲಾಗದೆ ವಿರೋಧ ಪಕ್ಷ ಈ ರೀತಿ ಗೂಂಡಾ ಸಂಸ್ಕೃತಿಯನ್ನು ಪ್ರದರ್ಶಿಸಲು ಮುಂದಾಗಿದ್ದು ಆಕ್ಷ್ಯಮ್ಯವಾಗಿದೆ ಎಂದರು.
ಈ ಹಿಂದೆ ಅಪರೇಷನ್ ಕಮಲ ಮಾಡಿ ಹಲವು ಬಾರಿ ಆಡಳಿತ ನಡೆಸಿದ ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ.
ಕೈಯಲ್ಲಿ ಆಗದವ ಮೈಪರಚಿಕೊಂಡತೆ ಬಿಜೆಪಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರಾಜ್ಯಪಾಲರ ಮುಖಾಂತರ ಸರಕಾರವನ್ನು ಅಸ್ಥಿರ ಗೊಳಿಸಲು ಹುನ್ನಾರ ನಡೆಸುತ್ತಿದೆ .
ತಮ್ಮ ಸರಕಾರ ಬಂದ ಕೂಡಲೇ ಅಭಿವೃದ್ಧಿ ನೆಪದಲ್ಲಿ ಜನಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಹೊಡೆದ ಬಿಜೆಪಿ ಈಗ ನೀರಿನ ಮೇಲೆ ಬಂದ ಮೀನಿನಂತಾಗಿದೆ. ಸಿದ್ದರಾಮ್ಯನವರ ವರ್ಚಸ್ಸು ದಿನದಿಂದ ದಿನಕ್ಕೆ ಏರಿಕೆಯಾಗುವುದನ್ನು ಸಹಿಸದ ವಿರೋಧ ಪಕ್ಷವು ಪೂರ್ಣ ಪ್ರಮಾಣದ ಸರ್ಕಾರ ಕೆಡವಲು ವಾಮಮಾರ್ಗ ಹಿಡಿದಿರುವುದು ಜನತೆ ಗಮನಿಸುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯರ ಮನೆಗೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಮತ್ತು ಇದಕ್ಕೆ ಕುಮ್ಮಕ್ಕು ಕೊಟ್ಟವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೃಷ್ಣಮೂರ್ತಿ ಆಚಾರ್ಯ ಆಗ್ರಹಿಸಿದ್ದಾರೆ.